

ಚಾಮರಾಜನಗರ: ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಶ್ರೀಧರ್(ಸಿರಿ) ಸಾಹಿತ್ಯ ಕ್ಷೇತ್ರದಲ್ಲಿ ಛಾಪುಮೂಡಿಸುತ್ತಿದ್ದು, ಅವರ ರಚನೆಯ ದೊಡ್ಡ ಸಂಪಿಗೆ ಕಥಾ ಸಂಕಲನ ಇಂಗ್ಲೀಷ್‌ಗೆ ತರ್ಜುಮೆಯಾಗಿದೆ.
ಮೂಲತಃ ವಿಜಯನಗರ ಜಿಲ್ಲೆಯವರಾಗಿರುವ ಶ್ರೀಧರ್ ಅವರು ಪ್ರಸ್ತುತ ಹರವೆ ಮತ್ತು ಕೊತ್ತಲವಾಡಿ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಚಾಮರಾಜನಗರದ ಗ್ರಾಮೀಣ ಮತ್ತು ಜಾನಪದ ಸೊಗಡನ್ನು ಕಥೆಯಾಗಿಸುತ್ತಿದ್ದಾರೆ. ನೈಜ ಘಟನೆಗಳಿಗೆ ಕಥೆಯ ಸ್ವರೂಪ ನೀಡುತ್ತಿರುವ ಅವರು ಒಡಪಾಡು ಮತ್ತು ದೊಡ್ಡಸಂಪಿಗೆ ಎಂಬ ಕಥಾ ಸಂಕಲವನ್ನು ಹೊರತಂದಿದ್ದಾರೆ. ಬಾಲ್ಯವನ್ನು ನೆನಪಿಸುವ ಗೌರಿ ಮಕ್ಕಳು ಕಥಾ ಸಂಕಲನ ಹಾಗೂ ಪಂಚಮುಖಿ ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಕವನ, ಕಥೆ, ನಾಟಕ ಹಾಗೂ ಲೇಖನ ಸಂಗ್ರಹದಲ್ಲಿ ಕೈಯಾಡಿಸಿರುವ ಶ್ರೀಧರ್ ಅವರು ಒಟ್ಟು 9 ಕೃತಿಗಳನ್ನು ರಚನೆ ಮಾಡಿದ್ದಾರೆ. ಇವರ ಸಾಹಿತ್ಯಕ್ಕೆ ಕೀರಿಟ ಎಂಬುವಂತೆ ಅವರ ದೊಡ್ಡಸಂಪಿಗೆ ಕಥಾ ಸಂಕಲನ ಇಂಗ್ಲೀಷ್ ಭಾಷೆಗೆ ತರ್ಜುಮೆಯಾಗಿದೆ. ತೀರ್ಥಹಳ್ಳಿಯ ಕವಯತ್ರಿ ಹಾಗೂ ಅನುವಾದಕಿ ಪದ್ಮಜಾ ಜೋಯ್ಸ ಅವರು ಸಂಕಲನವನ್ನು ಭಾಷಾಂತರ ಮಾಡಿದ್ದು, ಸಾಹಿತ್ಯ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಅದರಂತೆ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜಿಲ್ಲೆಯ ಸಾಹಿತ್ಯ ವಲಯದಲ್ಲಿ ತನ್ನದೇಯಾದ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ.
ಶ್ರೀಮಂತ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಚಾಮರಾಜನಗರದಲ್ಲಿ ಸಾಹಿತ್ಯ ಲೋಕಕ್ಕೆ ಹಲವರು ಕೊಡುಗೆ ನೀಡಿದ್ದಾರೆ. ಅಂತೆಯೇ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಈಚಲಬೊಮ್ಮನಹಳ್ಳಿಯವರಾದ ಶ್ರೀಧರ್ ಅವರು ಕೂಡ ತಮ್ಮ ಸಾಹಿತ್ಯದ ಮೂಲಕ ಕೊಡುಗೆ ನೀಡುತ್ತಿದ್ದಾರೆ.
ಜೂ.11 ರಂದು ಬಿಡುಗಡೆ:
ಈಶ್ವರಿ ಸೋಶಿಯಲ್ ಟ್ರಸ್ಟ್ ಹಾಗೂ ಕಾವ್ಯ ಸ್ಪಂದನ ಪಬ್ಲಿಕೇಷನ್ ಸಹಯೋಗದಲ್ಲಿ ಜೂ.11 ರಂದು ಸಾಹಿತಿ ಕೆ.ಶ್ರೀಧರ್(ಸಿರಿ) ಅವರ ಕನ್ನಡ ಪುಸ್ತಕಗಳ ಮರು ಲೋಕಾರ್ಪಣೆ ಮತ್ತು ‘ದಿ ಬಿಗ್ ಚಂಪಕ’ ಇಂಗ್ಲೀಷ್ ಕಥಾ ಸಂಕಲನ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬೆಳಗ್ಗೆ 10.30 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಉದ್ಘಾಟಿಸುವರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಮಹಾದೇವ ಶಂಕನಪುರ ಅಧ್ಯಕ್ಷತೆ ವಹಿಸುವರು. ಸಾಹಿತಿ ಮತ್ತು ವಿಮರ್ಶಕ ಬಿ.ಮಹೇಶ್ ಹರವೆ ಪುಸ್ತಕಗಳ ಲೋಕಾರ್ಪಣೆಗೊಳಿಸುವರು. ಲೇಖಕ ಭದ್ರಾವತಿ ರಾಮಾಚಾರಿ ಪುಸ್ತಕಗಳ ಕುರಿತು ಮಾತನಾಡುವರು. ಅನುವಾದಕರಾದ ಪದ್ಮಜಾ ಜೋಯ್ಸ, ಸಾಹಿತಿ ಅನಿಲ್‌ಕುಮಾರ್ ಹಾಗೂ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.