

ಚಿಂಚೋಳಿ: ಅವಳಿ ಪಟ್ಟಣದಲ್ಲಿ ಭಾನುವಾರ ಬಿಗಿ ಭದ್ರತೆ ಮಧ್ಯೆ ಯಶಸ್ವಿಯಾಗಿ ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ನಡೆಯಿತು. 1166 ಪರೀಕ್ಷಾರ್ಥಿಗಳು ಎಕ್ಸಾಮ್‌ಗೆ ಹಾಜರಾಗಿದ್ದರು.
ಸರ್ಕಾರಿ ಪದವಿಪೂರ್ವ ಕಾಲೇಜು, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರೇಂದ್ರ ಪಾಟೀಲ್ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 1292 ವಿದ್ಯಾರ್ಥಿಗಳಲ್ಲಿ 1166 ಜನ ಹಾಜರಾದರೆ, 126 ಪರೀಕ್ಷಾರ್ಥಿಗಳು ಗೈರಾಗಿದ್ದಾರೆ.
ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಎಕ್ಸಾಮ್ ಸೆಂಟರ್‌ಗಳ ಸುತ್ತಲೂ ಬಿಗಿ ಭದ್ರತೆ ಒದಗಿಸಲಾಗಿತ್ತು. ವಿವಿಧ ಗ್ರಾಮ, ನಗರಗಳಿಂದ ಬಂದ ಪರೀಕ್ಷಾರ್ಥಿಗಳನ್ನು ಕಟ್ಟುನಿಟ್ಟಿನಿಂದ ತಪಾಸಣೆ ಮಾಡಲಾಯಿತು. ಡಿವೈಸ್ ಇರಬಹುದೆಂದು ಎಲ್ಲರನ್ನು ಇಎನ್‌ಟಿ ವೈದ್ಯರು ತಪಾಸಣೆ ಮಾಡಿದರು. ವಿಶೇಷವಾಗಿ ಪೂರ್ಣ ತೋಳಿನ ಶರ್ಟ್ ಧರಿಸಿದವರಿಗೆ ಪ್ರವೇಶ ನೀಡಲಿಲ್ಲ. ಹೀಗಾಗಿ ಕೆಲವರು ಸ್ಥಳದಲ್ಲೇ ಶರ್ಟ್ ಕತ್ತರಿಸಿಕೊಂಡರು. ಯುವತಿಯರು ಕಿವಿಯೋಲೆ, ಮೂಗೋಲೆ ಹಾಗೂ ಯುವಕರು ವಾಚ್ ಇನ್ನಿತರ ಪರಿಕರಗಳನ್ನು ಪಾಲಕರಿಗೆ ನೀಡಿ ಕೇಂದ್ರದೊಳಗೆ ಹೋದರು.
ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ಸಿಪಿಐ ಕಪಿಲದೇವ, ಪಿಎಸ್‌ಐ ಗಂಗಮ್ಮ, ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ದುಗ್ಗನ್, ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷö್ಮಯ್ಯ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಮಲ್ಲಿಕಾರ್ಜುನ ಪಾಲಾಮೂರ ಇತರರು ಪರೀಕ್ಷಾ ಕಾರ್ಯ ಯಶಸ್ವಿಯಾಗಿ ನಡೆಯುವಲ್ಲಿ ಶ್ರಮಿಸಿದರು.
ಊಟಕ್ಕಾಗಿ ಪರದಾಟ: ಗಡಿ ಭಾಗದ ಚಿಂಚೋಳಿ ತಾಲೂಕಿನಲ್ಲಿ ಹೇಳಿಕೊಳ್ಳುವಂತ ಹೋಟೆಲ್‌ಗಳಿಲ್ಲ. ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆಗಾಗಿ ದೂರದ ಊರುಗಳಿಂದಲೂ ಸಾಕಷ್ಟು ಪರೀಕ್ಷಾರ್ಥಿಗಳು ಬಂದಿದ್ದರು. ಆದರೆ ಭಾನುವಾರ ಎಕ್ಸಾಮ್ ಆಯೋಜಿಸಿದ್ದು, ಇರುವ ವೀರೇಶ ಭವನ, ದುರ್ಗಾ ಭವನ ಸೇರಿ ಬೀದಿ ಬದಿಯ ಸಣ್ಣ-ಪುಟ್ಟ ಹೋಟೆಲ್‌ಗಳು ಬಂದ್ ಆಗಿದ್ದವು. ಇದರಿಂದಾಗಿ ಪರೀಕ್ಷಾರ್ಥಿಗಳು ಊಟಕ್ಕಾಗಿ ಪರದಾಡುವಂತಾಯಿತು.