

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ 2ನೇ ದಿನದ ಅನಿರ್ಧಿಷ್ಟಾವಧಿ ಮುಷ್ಕರ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಿತು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳು ರಾಜ್ಯಾದ್ಯಂತ ಮುಷ್ಕರ ಕೈಗೊಂಡಿದ್ದು, ಇವರ ನ್ಯಾಯಯುತ ಪ್ರಮುಖ ಹತ್ತು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಬಡವರ ಪರವಾಗಿ ಕಂದಾಯ ಇಲಾಖೆ ಅಧಿಕಾರಿಗಳು ಕರ್ತವ್ಯನಿರ್ವಹಿಸುತ್ತಿದ್ದು ಇವರ ಬಗ್ಗೆ ಕೂಡಲೇ ಗಮನ ಹರಿಸಿ ಬೇಡಿಕೆ ಈಡೇರಿಸಲಿ ಎಂದು ಒತ್ತಾಯಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ.ವಿಶ್ವನಾಥ್ ಮಾತನಾಡಿ, ರಾಜ್ಯಾದ್ಯಂತ ತಾಲ್ಲೂಕು ಕಚೇರಿ ಮುಂದೆ ನಮ್ಮ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭ ಮಾಡಲಾಗಿದೆ. ಆದರೆ, ಸರ್ಕಾರ ನಮ್ಮ ಬೇಡಿಕೆ ಈಡೇರಿಸದ ಕಾರಣ 2ನೇ ದಿನ ಜಿಲ್ಲಾಧಿಕಾರಿ ಕಚೇರಿ ಎದುರು ಮುಷ್ಕರ ಮುಂದುವರೆಸಿದ್ದೇವೆ. ನಮ್ಮ ಸೇವೆಗೆ ಅಗತ್ಯವಾಗಿರುವ ಸುಸಜ್ಜಿತ ಕಚೇರಿ, ಕುರ್ಚಿ, ಟೇಬಲ್, ಲ್ಯಾಪ್‌ಟಾಪ್, ಆಲ್ಮೇರಾ, ಮೊಬೈಲ್, ಸಿಮ್, ಸ್ಕಾನರ್ ಸೌಲಭ್ಯ ಒದಗಿಸಬೇಕು. ಸೌಲಭ್ಯಗಳನ್ನು ನೀಡದೆ ನಿಗದತ ಸಮಯದಲ್ಲಿ ಕೆಲಸ ಮಾಡಿ ರ‌್ಯಾಂಕ್ ಗುರಿ ತಲುಪಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಆದರೆ, ಸೇವಾ ಸೌಲಭ್ಯ ಮತ್ತು ಭದ್ರತೆ ನೀಡುತ್ತಿಲ್ಲ. ಅಲ್ಲದೇ ಕೌಟುಂಬಿಕ, ಆರೋಗ್ಯದ ಹಿತದೃಷ್ಟಿಯಿಂದ ರದ್ದುಗೊಳಿಸಿರುವ ಅಂತರ ಜಿಲ್ಲಾ ವರ್ಗಾವಣೆಯನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಉಪಾಧ್ಯಕ್ಷೆ ಶ್ರೀಲಕ್ಷ್ಮಿ, ಶಿವನಾಂದ ನಾಯಕ್,ಬಸವರಾಜು ಮಾದಾರ್, ಕೃಷ್ಣಪ್ಪ, ಹರೀಶ್ ರಾಜ್ ಅರಸ್, ಸುಹಾಸ್, ವಸಂತ ಕುಮಾರ್ ಇತರರು ಇದ್ದರು.