

ಕಂಪ್ಲಿ: ಎಮ್ಮಿಗನೂರು ಮತ್ತು ಶ್ರೀರಾಮರಂಗಾಪುರದಲ್ಲಿ ಕೆಕೆಆರ್‌ಡಿಬಿಯ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಗುರುವಾರ ಚಾಲನೆ ನೀಡಿದರು.
ಎಮ್ಮಿಗನೂರು ಗ್ರಾಮದ ಜಡೇಶ ನಗರದಲ್ಲಿ ಚರಂಡಿ ನಿರ್ಮಿಸುವಂತೆ ಸ್ಥಳೀಯರು ಶಾಸಕರಿಗೆ ಒತ್ತಾಯಿಸಿದರು. ಮಳೆ ಬಂದರೆ ಚರಂಡಿ ನೀರಿನೊಂದಿಗೆ ಮಳೆ ನೀರು ಸೇರಿ ಮನೆಯೊಳಗೆ ನುಗ್ಗುತ್ತದೆ ಎಂದು ಬಡಾವಣೆಯ ಕುರುಬರ ಜಡೆಮ್ಮ, ನಾಯಕರ ಈರಮ್ಮ, ಮಾರೆಮ್ಮ, ಚೌಡಮ್ಮ ಇತರರು ದೂರಿದರು.
ನರೇಗಾ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿ ಕೈ ಬಿಡುತ್ತಾರೆ. ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವುದಿಲ್ಲ. ನರೇಗಾ ಅನುದಾನ ವಾಪಸ್ ಹೋಗುತ್ತದೆ. ಚರಂಡಿ ನಿರ್ಮಾಣ, ಶಾಲಾವರಣ ಗೋಡೆ ಸೇರಿದಂತೆ ನಾನಾ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ. ಎಂದು ಹೆಬ್ಬಟ್ಟದ ರಾಮಾಂಜಿನಿ, ಟಿ.ಪಿ.ಜಡೆಪ್ಪ ಇತರರು ದೂರಿದರು.
ಶಾಸಕ ಜೆ.ಎನ್.ಗಣೇಶ್, ತಾಪಂ ಇಒ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನರೇಗಾ ಯೋಜನೆಯಡಿ ಜಡೇಶ ನಗರದಲ್ಲಿ ಚರಂಡಿ ಸೇರಿದಂತೆ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು. ಪ್ರಮುಖರಾದ ಶಿವಪ್ಪ, ಶೇಖಣ್ಣ, ಹೊಸಳ್ಳಿ ಜಡೇಶ, ಡಿ.ಕಾಸಿಂಸಾಬ್, ಈರಣ್ಣ, ಹೊನ್ನೂರಪ್ಪ, ಜಡೇಶ, ರಮೇಶ ಇತರರಿದ್ದರು.