

ಮುನವಳ್ಳಿ: ಕೃಷಿಯಲ್ಲಿ ರೈತರು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ರೂಪಿತಗೊಂಡಿರುವ ಸರ್ಕಾರದ ವಿವಿಧ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಎಸ್.ಎಲ್.ದೇಸಾಯಿ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಭಿಯಾನ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನ ಹಾಗೂ ರೈತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ವ್ಯವಸಾಯದಿಂದ ರೈತರು ಆರ್ಥಿಕವಾಗಿ ಸಬಲರಾಗಬೇಕು. ಇಳುವರಿ ಹೆಚ್ಚಿಸಲು ತಂತ್ರಜ್ಞಾನಗಳ ಬಳಕೆಗೆ ಹೊಂದಿಕೊಳ್ಳಬೇಕು. ಈ ನಿಟ್ಟಿನಲ್ಲಿ ಏಕಗವಾಕ್ಷಿ ವಿಸ್ತರಣಾ ಪದ್ಧತಿಯ ನೆರವಿನಿಂದ ಕೃಷಿ ಮಾಹಿತಿಯನ್ನು ಪಂಚಾಯತಿ ಮಟ್ಟದಲ್ಲಿ ನೀಡಲಾಗುತ್ತಿದೆ ಎಂದರು. ಧಾರವಾಡ ಕೃಷಿ ವಿಶ್ವವಿಲಯದ ವಿಜ್ಞಾನಿ ಡಾ.ಡಿ.ಎನ್.ಕಾಂಬ್ರೆಕರ್ ಮಾತನಾಡಿ, ದೀಪದ ಬಲೆ ಅಳವಡಿಸುವುದು ಮತ್ತು ಎಕರೆಗೆ 5 ಕಿಲೋಮೆಟ್ರಾಯಿಜಿನ್ ಪೌಡರ್ ಅನ್ನು ತಿಪ್ಪೆ ಗೊಬ್ಬರದಲ್ಲಿ ಬೆರೆಸಿ ಮಣ್ಣಿನಲ್ಲಿ ಹಾಕಿದರೆ ಗೊಣ್ಣೆ ಹುಳು ನಿಯಂತ್ರಣ ಸಾಧ್ಯ ಎಂದರು.
‘ಕೃಷಿ ಇಲಾಖೆ ನಡೆ ರೈತರ ಮನೆ ಬಾಗಿಲಿಗೆ’ ಜಾಗೃತಿ ವಾಹನಕ್ಕೆ ಪುರಸಭೆ ಅಧ್ಯಕ್ಷ ವಿಜಯ ಅಮಠೆ ಚಾಲನೆ ನೀಡಿದರು. ದುಂಡಪ್ಪ ಬುರ್ಜಿ, ನಿಂಗನಗೌಡ ಮಲಗೌಡರ, ಅಶೋಕ ಪಾಟೀಲ, ಸುಭಾಷ ಗಂಗಣ್ಣವರ, ಕೃಷಿ ಇಲಾಖೆಯ ರಾಘವೇಂದ್ರ ಬೋನಗೇರಿ, ಆರ್.ಎಸ್.ಜಂಬಗಿ, ಶಿವುಕುಮಾರ ಹಂಪಣ್ಣವರ, ಸುನೀಲ ನಾಯ್ಕರ ಇತರರಿದ್ದರು.