

ಪಾಂಡವಪುರ: ರಾಜ್ಯದ ಗ್ರಾಮ ಪಂಚಾಯಿತಿಗಳನ್ನು ಕೇರಳ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೇರಳದ ಕೇಲಾ ಸಂಸ್ಥೆ (ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ ಆರ್ಗನೈಸೇಷನ್) ಶುಕ್ರವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಪಿಡಿಒಗಳ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕೇರಳದಲ್ಲಿ ಗ್ರಾಮ ಪಂಚಾಯಿತಿಗಳು ಬಹಳಷ್ಟು ಅಭಿವೃದ್ಧಿ ಹೊಂದಿದೆ. ಅಲ್ಲಿನ ಪಂಚಾಯಿತಿಗಳು ಜನಸ್ನೇಹಿ ಆಡಳಿತ ನೀಡುತ್ತಿದ್ದು, ಗ್ರಾಮಕ್ಕೆ ಅವಶ್ಯಕವಾದ ಮೂಲಸೌಲಭ್ಯಗಳ ಬಗ್ಗೆ ಹೆಚ್ಚಿನ ಗಮನಹರಿಸಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಪಂಚಾಯಿತಿಗಳು ಬೆಳವಣಿಗೆ ಕಾಣಬೇಕು ಎಂದರು.
ತಾಲೂಕಿನ ಐದು ಗ್ರಾಪಂಗಳಾದ ಚಿನಕುರಳಿ, ಮೇಲುಕೋಟೆ, ಸುಂಕಾತೊಣ್ಣೂರು, ಕೆನ್ನಾಳು ಹಾಗೂ ಚಿಕ್ಕಾಡೆ ಗ್ರಾಮ ಪಂಚಾಯಿತಿಗಳು ಕೇಲಾ ಸಂಸ್ಥೆ ನೀಡುವ ಇಎಸ್‌ಒ ಪ್ರಮಾಣ ಪತ್ರಕ್ಕಾಗಿ ಆಯ್ಕೆಯಾಗಿದೆ. ಈಗಾಗಲೇ ಕೇಲಾ ಸಂಸ್ಥೆಯ ಅಧಿಕಾರಿಗಳು ಆಯ್ಕೆಯಾಗಿರುವ ಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಜತೆ ಚರ್ಚೆಸಿ ಗ್ರಾಮ ಪಂಚಾಯಿತಿಗಳು ಯಾವ ರೀತಿ ಕಾರ್ಯ ನಿರ್ವಹಿಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಆಯ್ಕೆಯಾಗಿರುವ ಗ್ರಾಪಂ ಅಲ್ಲದೇ ತಾಲೂಕಿನ ಎಲ್ಲ ಪಂಚಾಯಿತಿಗಳು ಇದೇ ಮಾದರಿಯಲ್ಲಿ ಕಾರ್ಯ ನಿರ್ವಹಿಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಇಒ ಮಾತನಾಡಿ, ಕೇಲಾ ಸಂಸ್ಥೆ ನೀಡುವ ಐಎಸ್‌ಒ ಪ್ರಮಾಣ ಪತ್ರ ಪಡೆಯಲು ಆಯ್ಕೆಯಾಗಿರುವ ತಾಲೂಕಿನ ಐದು ಗ್ರಾಪಂ ಸೇರಿದಂತೆ ರಾಜ್ಯದ ಇತರ ತಾಲೂಕುಗಳಲ್ಲಿನ ಗ್ರಾಪಂಗಳು ಆಯ್ಕೆಯಾಗಿದೆ. ನಮ್ಮ ಗ್ರಾಪಂಗಳು ಕೇಲಾ ಸಂಸ್ಥೆ ಅಧಿಕಾರಿಗಳು ನೀಡಿರುವ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ಎಸ್‌ಐಆರ್‌ಡಿ ಅಧಿಕಾರಿ ಪ್ರಮೋದ್, ಕೇರಳ ಕೇಲಾ ಸಂಸ್ಥೆಯ ಅಧಿಕಾರಿಗಳಾದ ಕೃಷ್ಣನ್, ಕಣ್ಣನ್, ಶಿರಿಷಾ, ತಾ.ಪಂ. ಎಡಿ ಸುರೇಂದ್ರ ಇತರರಿದ್ದರು.