

ಚಿಕ್ಕೋಡಿ: ಜಿಪಂ ಸಿಇಒ ರಾಹುಲ ಶಿಂಧೆ ಹುಕ್ಕೇರಿ ತಾಲೂಕಿನ ಯಮಕನಮರಡಿ, ಖಡಕಲಾಟ, ಪಟ್ಟಣಕೋಡಿ, ನವಲಿಹಾಳ ಮತ್ತು ವಾಳಕಿ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿ, ಸದಸ್ಯರೊಂದಿಗೆ ಸಭೆ ನಡೆಸಿ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ಉತಾರ ನಮೂನೆ-೯ ವಿತರಿಸುವ ಕುರಿತು ಮಾಹಿತಿ ನೀಡಿದರು.
ನಂತರ ಇ-ಸ್ವತ್ತು ನಮೂನೆ -೯ ಕೋರಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರ ಮನೆಗೆ ಖುದ್ದಾಗಿ ಭೇಟಿ ನೀಡಿ ದಿಶಾಂಕ ಮೊಬೈಲ ಆ್ಯಪ್ ಮೂಲಕ ಆಸ್ತಿಯ ಸರ್ವೇ ಮಾಡುವ ಕುರಿತು ಪರಿಶೀಲಿಸಿದರು. ಗ್ರಾಪಂ ಸದಸ್ಯರೊಂದಿಗೆ ಮಾತನಾಡಿ, ಇ-ಸ್ವತ್ತು ಉತಾರ ಮಾಡಿಸುವದರಿಂದ ಮೈಕ್ರೋ ಫೈನಾನ್ಸ್ಗಳ ಹಾವಳಿಯಿಂದ ನಾಗರಿಕರನ್ನು ಪಾರು ಮಾಡಬಹುದು. ಇ-ಸ್ವತ್ತು ಉತಾರ ಪಡೆದ -ಫಲಾನುಭವಿಗಳ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸೌಲಭ್ಯ ದೊರೆಯುತ್ತದೆ. ಕಾರಣ ಎಲ್ಲರೂ ಈ ದಿಸೆಯಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.
ಬಳಿಕ ಹರಗಾಪುರ ಗ್ರಾಮದಲ್ಲಿರುವ ಕಣಗಲಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೀರು ಶುದ್ಧೀಕರಣ ಘಟಕ ವೀಕ್ಷಿಸಿದರು. ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಪಂ ವ್ಯಾಪ್ತಿಯ ಡಬ್ಲು.ಟಿ.ಪಿ ವಾಟರ್ ಸಪ್ಲಾಯ್ ಪರಿಶೀಲಿಸಿದರು.
ನರೇಗಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ನವಲಿಹಾಳ ಗ್ರಾಪಂ ಕಟ್ಟಡ, ಸಂಜೀವಿನಿ ಶೆಡ್, ಗೋದಾಮು ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಗಣೇಶ ಹುಕ್ಕೇರಿ, ಚಿಕ್ಕೋಡಿ ತಾಪಂ ಇಒ ಎಸ್.ಎಸ್. ಕಾದ್ರೋಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಚಿಕ್ಕೋಡಿ ವಿಭಾಗ ಇಇ ಪಾಂಡುರಂಗರಾವ್, ವಿನಾಯಕ ಮಠಪತಿ, ಶಿವಾನಂದ ಶಿರಗಾಂವೆ, ಲಕ್ಷ್ಮಿ ನಾರಾಯಣ ಪಿ., ವಿನಾಯಕ ಪೂಜಾರ, ಅಭಿಷೇಕ ಪವಾರ, ಚೇತನ ಕಡಕೋಳ, ಸಂತೋಷ ಪಾಟೀಲ, ಬಿ.ಡಿ.ನಾಯಿಕವಾಡಿ ಇತರರಿದ್ದರು.