ಗ್ರಾಪಂಗಳಲ್ಲಿ ಸರ್ವರ್ ಸಮಸ್ಯೆ : ಜನರಿಗೆ ಉತ್ತರಿಸಲಾಗದ ಸ್ಥಿತಿಯಲ್ಲಿ ಜನಪ್ರತಿನಿಧಿಗಳು

2
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಗ್ರಾಮ ಪಂಚಾಯಿತಿಗಳನ್ನು ಸರ್ವರ್ ಸಮಸ್ಯೆ ಬಾಧಿಸುತ್ತಿದ್ದು, ಕಳೆದ 6 ತಿಂಗಳಿಂದಲೂ ಜನ ಮತ್ತು ಸ್ಥಳೀಯ ಆಡಳಿತ ಮಂಡಳಿ ತೊಂದರೆ ಅನುಭವಿಸುವಂತೆ ಆಗಿದೆ.

ಗ್ರಾಮೀಣ ಭಾಗದಲ್ಲಿ ಪ್ರಮುಖವಾಗಿ ಇ -ಸ್ವತ್ತು ಪಡೆಯಲು ಸರ್ವರ್ ಸಮಸ್ಯೆ ಶುರುವಾಗಿದ್ದು, ಇದಕ್ಕಾಗಿ ಪ್ರತಿದಿನ ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳು ಆರೋಪಗಳ ಸುರಿಮಳೆ ಎದುರಿಸುವಂತೆ ಆಗಿದೆ. ಇ-ಸ್ವತ್ತು ಪಡೆಯಲು ಈ ಮೊದಲು ಎಸ್‌ಡಿಎಂ ಸದಸ್ಯ, ಪಿಡಿಒ, ಗ್ರಾಪಂ ಕಾರ‌್ಯದರ್ಶಿಗಳು ತಮ್ಮ ಬಯೋಮೆಟ್ರಿಕ್ ಮೂಲಕ ದಿನಕ್ಕೊಮ್ಮೆ ಲಾಗಿನ್ ಆಗಿದ್ದರೆ ಸಾಕಿತ್ತು. ಆದರೆ, 6 ತಿಂಗಳ ಹಿಂದೆ ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಪ್ರತಿ ಸ್ವತ್ತಿನ ಇ-ಖಾತೆ ಪಡೆಯಬೇಕಿದ್ದರೂ ಪಿಡಿಒ ತಮ್ಮ ಬಯೋಮೆಟ್ರಿಕ್ ನೀಡಬೇಕು. ಸರ್ವರ್ ಸಮಸ್ಯೆಯಿಂದಾಗಿ ಪ್ರತಿದಿನ ಒಂದೇ ಒಂದು ಇ-ಖಾತೆ ಪಡೆಯಲು ಆಗುತ್ತಿಲ್ಲ.

ಪ್ರತಿ ಅರ್ಜಿಗೂ ಪಿಡಿಒ ಸ್ಥಳದಲ್ಲೇ ಕುಳಿತು ಬಯೋಮೆಟ್ರಿಕ್ ಸಲ್ಲಿಸಬೇಕು. ಅವರು ರಜೆ ಇದ್ದರೆ, ಕ್ಷೇತ್ರ ಕಾರ್ಯದಲ್ಲಿ ಇದ್ದರೆ ಇಡೀ ದಿನ ಸರ್ವರ್ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಒಮ್ಮೊಮ್ಮೆ ಪಿಡಿಒಗಳ ಹೆಬ್ಬೆರಳು ಸ್ಕಾೃನ್ ಆಗುವುದಿಲ್ಲ ಎಂಬ ದೂರುಗಳೂ ಇವೆ. ಪ್ರತಿ ಅರ್ಜಿಗೊಂದರಂತೆ ಪಿಡಿಒಗಳು ಬಯೋಮೆಟ್ರಿಕ್ ನೀಡುತ್ತಿರುವುದರಿಂದ ಸರ್ವರ್ ಹ್ಯಾಂಗ್ ಆಗುತ್ತಿದ್ದು, ಸರ್ವರ್ ಡೌನ್ ಸಾಮಾನ್ಯ ಎನ್ನುವಂತೆ ಆಗಿದೆ.

ಕಳೆದ 6 ತಿಂಗಳಿನಿಂದ ಸರ್ವರ್ ಡೌನ್ ಎಂಬುದು ಸಾಮಾನ್ಯವಾಗಿದೆ. ಇ-ಖಾತೆಗಾಗಿ ಬರುವ ರೈತರು ನಮ್ಮ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ನಮಗೆ ಹಣ ನೀಡಿಲ್ಲ. ಹೀಗಾಗಿ ಸರ್ವರ್ ಡೌನ್ ಎಂಬ ಕಾರಣ ನೀಡುತ್ತಿದ್ದೇವೆ ಎಂದು ತಪ್ಪು ತಿಳಿದುಕೊಳ್ಳುತ್ತಿದ್ದಾರೆ. ಈ ಬಗ್ಗೆ ತಾಪಂ ಇಒ, ಜಿಪಂ ಸಿಇಒ ಗಮನಕ್ಕೆ ಅನೇಕ ಬಾರಿ ದೂರು ನೀಡಿದ್ದೇವೆ. ಆದರೂ, ಸರ್ವರ್ ಸಮಸ್ಯೆ ಸರಿಹೋಗಿಲ್ಲ ಎನ್ನುವುದು ಗ್ರಾಪಂ ಜನಪ್ರತಿನಿಧಿಗಳ ಆರೋಪ.

ಇ-ಸ್ವತ್ತು ಬೇಕೇ ಬೇಕು: ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ವಿಚಾರಕ್ಕೂ ಇ-ಸ್ವತ್ತಿನ ಅಗತ್ಯವಿದೆ. ಆಸ್ತಿ ಖರೀದಿ, ಮಾರಾಟ, ಅಡಮಾನ ಇಡುವುದು, ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಇ-ಖಾತೆ ಅಗತ್ಯವಾಗಿ ಬೇಕು. ಕೆಲವೊಮ್ಮೆ ಸರ್ಕಾರಿ ಯೋಜನೆಗಳನ್ನು ಪಡೆಯಲು ಇ-ಖಾತೆ ಕಡ್ಡಾಯ. ಆದರೆ, 6 ತಿಂಗಳಿನಿಂದ ಇ-ಖಾತೆ ಪಡೆಯಲು ಸಾಧ್ಯವೇ ಆಗುತ್ತಿಲ್ಲ.

ಸರ್ವರ್ ಸಮಸ್ಯೆ ಬಗ್ಗೆ ದೂರು ಬಂದ ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ವಿನಿಮಯ ಮಾಡಲಾಗುತ್ತಿದೆ. ಆಗಾಗ ಸಮಸ್ಯೆ ಪರಿಹಾರಕ್ಕೂ ಕ್ರಮ ವಹಿಸಲಾಗುತ್ತಿದೆ. ಇದರ ಬಗ್ಗೆ ಇಲಾಖೆಗೂ ಮಾಹಿತಿ ನೀಡಲಾಗಿದೆ. ಇಕ್ರಂ, ಸಿಇಒ, ಜಿಪಂ ರಾಮನಗರ ಸರ್ವರ್ ಸಮಸ್ಯೆಯಿಂದಾಗಿ ನಾವೆಲ್ಲರೂ ಜನರ ಎದುರು ಖಳನಾಯಕರಾಗುತ್ತಿದ್ದೇವೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೆ ರಾಜ್ಯದ ಸಮಸ್ಯೆ ಎನ್ನುತ್ತಾರೆ. ಸರ್ಕಾರ ಕೂಡಲೇ ಇದಕ್ಕೆ ಪರಿಹಾರ ಕಂಡುಕೊಡಬೇಕು. ಇಲ್ಲವಾದರೆ ಸ್ಥಳೀಯರು ಸಾಕಷ್ಟು ಸಮಸ್ಯೆಗೆ ಒಳಗಾಗುತ್ತಾರೆ. ಆಶಾ ಮಂಚೇಗೌಡ, ಅಧ್ಯಕ್ಷೆ, ಹರೀಸಂದ್ರ ಗ್ರಾಪಂ ನಮ್ಮ ಮನೆಯ ಕಷ್ಟಕ್ಕಾಗಿ ಸೈಟ್ ಮಾರಾಟ ಮಾಡಬೇಕು. ಆದರೆ ಇ-ಖಾತೆ ಇಲ್ಲದೆ ನಿವೇಶನ ಮಾರಾಟ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಕಳೆದ ನಾಲ್ಕು ತಿಂಗಳಿಂದಲೂ ಗ್ರಾಪಂ ಕಚೇರಿಗೆ ಅಲೆಯುತ್ತಿದ್ದರೂ ಪ್ರಯೋಜನವಾಗಿಲ್ಲ. ಯಾವಾಗ ಕೇಳಿದರೂ ಸರ್ವರ್ ಸಮಸ್ಯೆ ಎನ್ನುತ್ತಾರೆ. ಮುನಿಯಪ್ಪ, ಕೆಂಪೇಗೌಡನದೊಡ್ಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net