

ಬಾಗಲಕೋಟೆ: ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದಿಂದ ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಇಲ್ಲಿನ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಮಹಾಒಕ್ಕೂಟದ ಸದಸ್ಯರು, ರಾಜ್ಯ ಸÀರ್ಕಾರ ರೂಪಿಸಿರುವ ಎಲ್ಲಾ ಯೋಜನೆಗಳಿಗೆ ಅವಶ್ಯಕವಾದ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿ ಅಪರ ಜಿಲ್ಲಾಽಕಾರಿ ಸಂತೋಷ ಜಗಲಾಸರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನಲ್ಲಿ ಕೇಂದ್ರೀಕರಣಗೊಂಡಿರುವ ಆಡಳಿತವನ್ನು ಸಂವಿಧಾನ ಮತ್ತು ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯ್ದೆ ಅನ್ವಯ ವಿಕೇಂದ್ರಿಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಮ್ಮ ಬೇಡಿಕೆಗಳನ್ನು ಅಕ್ಟೋಬರ್ ೨ರ ಒಳಗಾಗಿ ಈಡೇರಿಸದಿದ್ದಲ್ಲಿ ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯರ ನಿರ್ಣಾಯಕ ಹೋರಾಟವನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಪಂಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಅನೇಕ ಕಾಯ್ದೆ ವಿರೋಽ ನಿಯಮಗಳು, ಸುತ್ತೋಲೆಗಳು, ನಿರ್ಣಯಗಳು, ಮೇಲಽಕಾರಿಗಳ ನಡೆಗಳು, ಅನುಷ್ಠಾನಗೊಳ್ಳದ ಕಾಯ್ದೆಗಳ ಅನೇಕ ಅಂಶಗಳು ಕಾರಣವಾಗಿರುವುದನ್ನು ಮನಗಂಡು ಫೆ.೮ ರಂದು ಬೆಂಗಳೂರಿನಲ್ಲಿ ಹೋರಾಟ ಮಾಡಲಾಗಿತ್ತು. ಅಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಫೆ.೧೨ ರಂದು ತಮ್ಮ ಕಚೇರಿಗೆ ಕರೆದು, ಚರ್ಚಿಸಿ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಬೇಡಿಕೆ ಈಡೇರಿಸಿಲ್ಲ. ಆದ್ದರಿಂದ ಪ್ರತಿಭಟನೆಯ ಹಾದಿ ಅನಿವಾರ್ಯ ಎಂದು ತಿಳಿಸಿದ್ದಾರೆ.
ಒಕ್ಕೂಟದ ಮುಖಂಡರಾದ ರಮೇಶ ಇಂಗಳಗಿ, ಭೀಮಸಿ ಕರಡಿಗುಡ್ಡ, ಶಾಸಪ್ಪ ಕುರಿ, ಪ್ರವೀಣ ಅರಕೇರಿ ಇತರರು ಇದ್ದರು.