ಗ್ರಾಪಂಗಳಲ್ಲಿ ಆರೋಗ್ಯ ಶಿಬಿರ ಆಯೋಜನೆ ಚಿಂತನೆ

bhr gannn
ಬಾಳೆಹೊನ್ನೂರಿನ ಜೆಸಿಐ, ವಿದ್ಯಾಗಣಪತಿ ಸಮಿತಿ ಆಯೋಜಿಸಿದ್ದ ರಾಜ್ಯಮಟ್ಟದ ಫಿಲ್ಮಿ ಡಾನ್ಸ್ ಸ್ಪರ್ಧೆಯನ್ನು ಮುಖ್ಯಶಿಕ್ಷಕ ಶ್ರೀಕಾಂತ್ ಗದ್ದೆಮನೆ, ಇಬ್ರಾಹಿಂ ಶಾಫಿ, ಕೆ.ಎಸ್.ಚನ್ನಗಿರಿ ಉದ್ಘಾಟಿಸಿದರು. ರವಿಚಂದ್ರ, ಶಶಿಧರ್, ಸಿ.ವಿ.ಸುನೀಲ್, ವಿ.ಅಶೋಕ್ ಇತರರಿದ್ದರು.
Published on

ಬಾಳೆಹೊನ್ನೂರು: ಉದ್ಯಮಿ ವಿಶ್ವನಾಥ್ ಗದ್ದೆಮನೆ ಬಳಗದಿಂದ ಅಕ್ಟೋಬರ್‌ನಿಂದ ಶೃಂಗೇರಿ ಕ್ಷೇತ್ರದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳ ಸಹಕಾರ ಪಡೆದು ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದು ಮೂಡಬಾಗಿಲು ಮುಖ್ಯಶಿಕ್ಷಕ ಶ್ರೀಕಾಂತ್ ಗದ್ದೆಮನೆ ತಿಳಿಸಿದರು.

ಪಟ್ಟಣದ ವಿದ್ಯಾಗಣಪತಿ ಮಹೋತ್ಸವ ಅಂಗವಾಗಿ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಫಿಲ್ಮಿ ನೃತ್ಯ ಸ್ಪರ್ಧೆಯಲ್ಲಿ ಮಾತನಾಡಿದರು. ಗದ್ದೆಮನೆ ಕುಟುಂಬದ ವಿಶ್ವನಾಥ್ ಅವರು ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿವಿಧ ಸಾಮಗ್ರಿ ವಿತರಿಸಿದ್ದಾರೆ. ಜನರಿಗೆ ಆರೋಗ್ಯ ಸೇವೆ ಒದಗಿಸಲು ಅಕ್ಟೋಬರ್‌ನಿಂದ ಕ್ಷೇತ್ರದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ರೋಟರಿ, ಜೇಸಿ, ಲಯನ್ಸ್ ಸಂಸ್ಥೆಗಳನ್ನು ಜೋಡಿಸಿಕೊಂಡು ಕಾರ್ಯಕ್ರಮ ಮಾಡಲಾಗುವುದು. ಉತ್ತಮ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ಕೆ.ಎಸ್.ಚನ್ನಗಿರಿ ಮಾತನಾಡಿ, ಯುವಜನರಿಗಾಗಿ ಜೆಸಿಐ ಗಣೇಶೋತ್ಸವದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಿ ಉತ್ತಮ ಅವಕಾಶ ನೀಡಿದೆ ಎಂದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಗ್ರಾಪಂಗೂ ಜೇಸಿ ಸಂಸ್ಥೆಗೂ ನಿಕಟ ಸಂಪರ್ಕವಿದೆ. ಸಮಾಜ ಸೇವೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜೆಸಿಐ ಸಹಕಾರದೊಂದಿಗೆ ಗಣೇಶೋತ್ಸವ ನಡೆಯುವ ಕಲಾರಂಗ ಕ್ರೀಡಾಂಗಣವನ್ನು ಗುಣಮಟ್ಟದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಮುಂದಿನ ವರ್ಷದ ಗಣೇಶೋತ್ಸವ ಸುಗಮವಾಗಿ ನೆರವೇರುವಂತೆ ಮಾಡಲಾಗುವುದು ಎಂದರು.

ಜೆಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ, ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ವಿದ್ಯಾಗಣಪತಿ ಸಮಿತಿ ಕಾರ್ಯದರ್ಶಿ ಸಿ.ವಿ.ಸುನೀಲ್, ಕಾರ್ಯದರ್ಶಿ ವಿ.ಅಶೋಕ್, ಕಾರ್ಯಕ್ರಮ ನಿರ್ದೇಶಕ ನಿಖಿಲ್ ಕಾನ್ಕೆರೆ, ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಕೆ.ಎಂ.ರಾಘವೇಂದ್ರ ಇತರರಿದ್ದರು.

ನೃತ್ಯ ಸ್ಪರ್ಧೆಯ ಗ್ರೂಪ್ ಡಾನ್ಸ್ ವಿಭಾಗದಲ್ಲಿ ಕಿಂಗ್ಸ್ ಆಫ್ ಕೂರ್ಗ್ ಮಡಿಕೇರಿ (ಪ್ರ), ನಾಟ್ಯ ಸ್ಕೂಲ್ ಆಫ್ ಡ್ಯಾನ್ಸ್ ಕುಂದಾಪುರ (ದ್ವಿ), ಡ್ಯಾನ್ಸ್ ಪ್ಯಾಲೇಸ್ ತೀರ್ಥಹಳ್ಳಿ (ತೃ), ನ್ಯೂ ಸ್ಟೆಪ್ ಡ್ಯಾನ್ಸ್ ಸ್ಟುಡಿಯೋ (ಚತುರ್ಥ) ಬಹುಮಾನ ಪಡೆದವು. ಡ್ಯುಯೆಲ್ ಡಾನ್ಸ್ ವಿಭಾಗದಲ್ಲಿ ನಾಟ್ಯ ಸ್ಕೂಲ್ ಆಫ್ ಡ್ಯಾನ್ಸ್ ಕುಂದಾಪುರ (ಪ್ರ), ಡ್ಯಾನ್ಸಿಂಗ್ ಸ್ಟಾರ್ ಮಂಗಳೂರು (ದ್ವಿತೀಯ), ಡ್ರೀಮ್ ಡ್ಯಾನ್ಸ್ ಸ್ಕೂಲ್ ಹಾಸನ (ತೃತೀಯ) ಬಹುಮಾನ ಗಳಿಸಿದವು. ವಿಜೇತರಿಗೆ ನಗದು ಬಹುಮಾನ, ಟ್ರೋಫಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net