ಗ್ರಾಪಂ ಹಣ ದುರ್ಬಳಕೆ: ತನಿಖೆಗೆ ಆಗ್ರಹ:ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ

ಗ್ರಾಪಂ ಹಣ ದುರ್ಬಳಕೆ: ತನಿಖೆಗೆ ಆಗ್ರಹ:ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ
Published on

 ಹಾಸನ: ಸಕಲೇಶಪುರ ತಾಲೂಕು ವಳಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಣ ದುರ್ಬಳಕೆ ಆಗಿದ್ದು, ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಯಬೇಕು ಎಂದು ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ ಆಗ್ರಹಿಸಿದರು.

ನಿಧಿ (1) ಮತ್ತು 15ನೇ ಹಣಕಾಸಿನ ಯೋಜನೆಯಲ್ಲಿ ಹಣ ದುರುಪಯೋಗ ಆಗಿದೆ. ತನಿಖೆ ನಡೆಸಿ ತಪ್ಪಿಕಸ್ತರ ವಿರುದ್ಧ ಶಿಸ್ತುಕ್ರಮ

ಜರುಗಿಸಬೇಕು, ಇಲ್ಲದಿದ್ದರೆ ಹಾಸನ ಜಿಪಂ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಎಚ್ಚರಿಸಿದರು.

ನಿಧಿ (1) ರಲ್ಲಿ 2022-23 ಮತ್ತು 2023-24ರ ಅನುದಾನದಲ್ಲಿ ಖರ್ಚು ಮತ್ತು ವೆಚ್ಚದ ಬಗ್ಗೆ ಯಾವ ದಾಖಲೆ ಇಲ್ಲ. ಅಧ್ಯಕ್ಷೆ ಶೀಲಾ ಮಹೇಶ್ ಅವರು ತಮ್ಮ ಸಹೋದರನ ಹೆಸರಿಗೆ ಸುಮಾರು 1 ಲಕ್ಷಕ್ಕೂ ಅಧಿಕ ಮೊತ್ತದ ಚೆಕ್ ನೀಡಿದ್ದಾರೆ ಎಂದು ದೂರಿದರು.

ಇದಕ್ಕೆ ಯಾವ ದಾಖಲೆಗಳೂ ಇಲ್ಲ. ಇದೇ ರೀತಿ ಇನ್ನೂ ಹಲವಾರು ಹೆಸರಿಗೆ ಚೆಕ್ ಕೊಟ್ಟು ಹಣ ಪಾವತಿಸಿದ್ದಾರೆ ಮತ್ತು 15ನೇ ಹಣಕಾಸಿನ ಅನುದಾನದಲ್ಲಿ 2023 ಮತ್ತು 2024 ನೇ ಸಾಲಿನಲ್ಲಿ ಕ್ರಿಯಾ ಯೋಜನೆಗೆ ಗ್ರಾಮ ಸಭೆಯಲ್ಲಿ ಮಂಜೂರಾತಿ ಪಡೆದಿಲ್ಲ. 2022-23 ಹಾಗೂ 2023 ರಿಂದ 2024 ರಲ್ಲಿ ಲಕ್ಷಾಂತರ ರೂ.ಗಳನ್ನು ಯಾವ ದಾಖಲೆಗಳೂ ಇಲ್ಲದೆ ಬ್ಯಾಂಕಿನಲ್ಲಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಹಣ ಪಡೆದಿದ್ದಾರೆ ಎಂದು ಆರೋಪಿಸಿದರು.

ಕಳೆದ 4 ವರ್ಷಗಳ ಅವಧಿಯಲ್ಲಿ ಸಾಕಷ್ಟು ಹಣ ದುರುಪಯೋಗ ಆಗಿದೆ. ಅಂದಾಜು 25 ಲಕ್ಷಕ್ಕೂ ಅಧಿಕ ಹಣ ದುರ್ಬಳಕೆ ಆಗಿದೆ. ಮತ್ತೊಂದೆಡೆ ಗ್ರಾಪಂ ಕರ ವಸೂಲಿಗಾರ, ಸಾರ್ವಜನಿಕರ 1 ಲಕ್ಷ ರೂ. ತೆರಿಗೆ ಹಣವನ್ನು ಬ್ಯಾಂಕಿಗೆ ಕಟ್ಟಿಲ್ಲ ಎಂದೂ ಆರೋಪಿಸಿದರು. ಸರ್ಕಾರದ ಹಣದಲ್ಲಿ ನೀತಿ ನಿಯಮ ಗಾಳಿ ತೂರಿ, ಮನಸೋ ಇಚ್ಛೆ ಪೈಪ್ ಖರೀದಿಸಿ ಬೇಕಾದವರಿಗೆ ಅಳವಡಿಸಲಾಗಿದೆ. ಸಾರ್ವಜನಿಕ ಅನುಕೂಲಕ್ಕೆ ಅಳವಡಿಸಬೇಕಾದ ಮೋರಿ, ಪೈಪ್‌ಗಳು ವೈಯಕ್ತಿಕ, ಸ್ವಂತಕ್ಕೆ ಬಳಸಿರುವುದು ಕಂಡು ಬಂದಿದೆ. 1 ವರ್ಷದಿಂದ ಗ್ರಾಮ ಸಭೆ ನಡೆದಿಲ್ಲ. ಎಸ್‌ಸಿ-ಎಸ್‌ಟಿ ಹಣ ಹಂಚಿಕೆಯಲ್ಲೂ ಅನ್ಯಾಯ ಮಾಡಲಾಗಿದೆ.ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಇದು ಹೀಗೆ ಮುಂದುವರಿದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥ ರುದ್ರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net