

ಚಿತ್ರದುರ್ಗ: ಗ್ರಾಪಂಗಳ ಸಿಬ್ಬಂದಿ ಕಾಯಂಗೊಳಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ಜಿಲ್ಲಾ ಸಂಘ, ಸಿಐಟಿಯು ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ಜಿಪಂ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಸಿಬ್ಬಂದಿ ಹಿತ ಕಾಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಧಿಕ್ಕಾರ ಕೂಗಿದರು. ನ್ಯಾಯಯುತ ಬೇಡಿಕೆ ಈಡೇರಿಸಬೇಕೆಂದು ಉಭಯ ಸರ್ಕಾರಗಳಿಗೆ ಒತ್ತಾಯಿಸಿ ಮನವಿ ರವಾನಿಸಿದರು.
ಕನಿಷ್ಠ 31 ಸಾವಿರ ರೂ. ವೇತನ, 6 ಸಾವಿರ ರೂ. ಪಿಂಚಣಿಗೆ ಕೂಡಲೇ ಆದೇಶಿಸಬೇಕು. 2024-25ನೇ ಸಾಲಿನ ಜೇಷ್ಠತ ಪಟ್ಟಿ ಬಿಡುಗಡೆಗೊಳಿಸಬೇಕು. ಸಿಬ್ಬಂದಿಗಳನ್ನು ಜಿಪಂ ಮೂಲಕವೇ ಅನುಮೋದಿಸಬೇಕು ಎಂದು ಆಗ್ರಹಿಸಿದರು.
15ನೇ ಹಣಕಾಸಿನಲ್ಲಿ ಬಾಕಿ ವೇತನ, 20 ತಿಂಗಳ ನಿವೃತ್ತಿ ಮೊತ್ತ ಪಾವತಿಗೆ ಕ್ರಮವಹಿಸಬೇಕು. ಸ್ವಚ್ಛವಾಹಿನಿ ಆಟೋ ಚಾಲಕರು, ಸಹಾಯಕರಿಗೆ ಹಾಗೂ ತರಬೇತಿ ಪಡೆದವರಿಗೆ ಮಾಸಿಕ 5ನೇ ತಾರೀಖಿನೊಳಗೆ ನಿಗದಿತ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಸೇವೆ ಕಾಯಂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಜಿಪಂ ಬಳಿ ಬುಧವಾರವೂ ಪ್ರತಿಭಟನೆ ನಡೆಸಿದರು.
ಸಿಐಟಿಯು ಸಂಚಾಲಕ ಡಿ.ಎಂ.ಮಲಿಯಪ್ಪ, ಸಹ ಸಂಚಾಲಕ ಸಿ.ಕೆ.ಗೌಸ್‌ಪೀರ್, ಇಂದಿರಮ್ಮ, ಜೆ.ಎನ್.ಗಂಗಮ್ಮ, ಬಿ.ಬೋರಮ್ಮ, ನಿರ್ಮಲಾ, ಆಶಾರಾಣಿ, ಮಂಜುಳಾ, ಕಮಲಾ, ಎಸ್.ಕಲ್ಯಾಣಮ್ಮ, ತಿಪ್ಪೇಸ್ವಾಮಿ, ಲಿಂಗಣ್ಣ, ನಿಂಗಮ್ಮ, ಜಯಲಕ್ಷ್ಮೀ ಇತರರಿದ್ದರು.