ಗ್ರಾಪಂ ಸಿಬ್ಬಂದಿ ಅನಿರ್ಧಿಷ್ಟಾವಧಿ ಹೋರಾಟ

Published on

ಬಳ್ಳಾರಿ : ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ವೃಂದ ಸಂಘಗಳು ಹಾಗೂ ಕರ್ನಾಟಕ ಗ್ರಾಮ ಪಂಚಾಯತ್ ಒಕ್ಕೂಟದಿಂದ ಅ. 4 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಒಕ್ಕೂಟದ ಜಿಲ್ಲಾದ್ಯಕ್ಷ ಬಾಣಾಪುರ ನಾಗರಾಜ ಗೌಡ ಹೇಳಿದರು.
ನಗರ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಪಂ ಎಲ್ಲ ಸಿಬ್ಬಂದಿಯು ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರು, ಯಾವುದೇ ಸ್ಪಂದನೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಪಿಡಿಒ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸುವುದು. ಪಿಡಿಒಗಳ ಜೇಷ್ಠತಾ ಪಟ್ಟಿ ಹಾಗೂ ಬಡ್ತಿಯಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಬೇಕು. ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮ ಕೈಬಿಡಬೇಕು. ಎಂಜಿಎನ್‌ಆರ್‌ಇಜಿಎ ಯೋಜನೆ ಅನುಷ್ಠಾನ ಪಡಿಸುವ ಬಗ್ಗೆ ಗುರಿಯನ್ನು ನಿಗದಿ ಕೈಬಿಡುವುದು. ಗ್ರಾಪಂ ಅಗತ್ಯವಿರುವ ಕಾರ್ಯದರ್ಶಿಗಳ ಲೆಕ್ಕ ಸಹಾಯಕರು ಹಾಗೂ ಅಗತ್ಯವಿದ್ದಷ್ಟು ಗ್ರಾಪಂ ಸಿಬ್ಬಂದಿ ನೇಮಿಸಬೇಕು. ಗ್ರಾಪಂ ಸಿಬ್ಬಂದಿ ಮಾದರಿ ಪರಿಷ್ಕರಿಸಿ ಪ್ರತಿಯೊಂದು ವಿಷಯಕ್ಕೂ ಒಬ್ಬ ವಿಷಯ ನಿರ್ವಾಹಕರನ್ನು ನೇಮಕ ಹಾಗೂ ತಾಂತ್ರಿಕ ಸಿಬ್ಬಂದಿ ಒದಗಿಸಬೇಕು ಎಂದು ಒತ್ತಾಯಿಸಿದರು. ಸಂಘದ ಸದಸ್ಯರಾದ ಎಂ. ಹುಸೇನ್ ಪೀರಾ, ಪಂಪಯ್ಯ, ಶೇಕ್ಷಾವಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net