ಸೋಮವಾರಪೇಟೆ: ಗೌಡಳ್ಳಿ ಗ್ರಾಮ ಪಂಚಾಯಿತಿಗೆ ನರೇಗಾ ಯೋಜನೆಯಡಿ ಅನುದಾನ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಸದಸ್ಯರು ಮಂಗಳವಾರ ಸಾಮಾನ್ಯ ಸಭೆ ಬಹಿಷ್ಕರಿಸಿ ಹೊರ ನಡೆದರು.
ಅಧ್ಯಕ್ಷೆ ಜಿ.ಜಿ.ಮಲ್ಲಿಕಾ ಅಧ್ಯಕ್ಷತೆಯ ಸಭೆಯಲ್ಲಿ ಸದಸ್ಯ ನವೀನ್ ಅಜ್ಜಳ್ಳಿ ಮಾತನಾಡಿ, 2022- 23ರ ಸಾಲಿನಲ್ಲಿ ನರೇಗಾದಲ್ಲಿ 44 ಲಕ್ಷ ರೂ. ಉದ್ಯೋಗ ಸೃಷ್ಟಿಯಾಗಿದೆ. ಸಾಮಗ್ರಿ ಬಿಲ್ ಜಾಸ್ತಿಯಾಗಿದೆ ಎಂದು ಕೂಲಿ ಮೊತ್ತವನ್ನು ತಡೆಹಿಡಿಯಲಾಗಿದೆ. ಇದರಿಂದ ಸಮಸ್ಯೆಯಾಗಿದೆ ಎಂದು ಹೇಳಿದರು.
ನರೇಗಾ ಯೋಜನೆಯಲ್ಲಿ ಹೆಚ್ಚಿನ ಕಾಮಗಾರಿಗಳು ನಡೆಯುತ್ತಿದ್ದವು. ಈಗ ಯೋಜನೆ ಲಾಕ್ ಆಗಿರುವುದರಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ರೈತರು ಅಕ್ರೋಶಗೊಂಡಿದ್ದಾರೆ ಎಂದು ಸದಸ್ಯರಾದ ಕೆ.ಎಂ. ರೋಹಿಣಿ, ಸಿ.ಈ.ವೆಂಕಟೇಶ್, ಜಿ.ಎಸ್.ಪ್ರಸನ್ನ, ಬಿ.ಎಚ್.ಮಂಜುನಾಥ್, ಕೆ.ಕೆ.ಸುಮಾ, ಜಿ.ಜಿ.ಗಣೇಶ್, ಕೆ.ಡಿ.ವಿಶಾಲಾಕ್ಷಿ, ಕೆ.ಡಿ.ಗೌರಿ ಅಸಮಾಧಾನ ವ್ಯಕ್ತಪಡಿಸಿದರು.
ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಡೇಟಾ ಅಪರೇಟರ್, ಅಟೆಂಡರ್, ತ್ಯಾಜ್ಯ ಸಂಗ್ರಹ ವಾಹನದ ಚಾಲಕ ಇಲ್ಲ. ಈ ಸಂದರ್ಭ ನರೇಗಾ ಹಣವನ್ನು ತಡೆ ಹಿಡಿದರೆ ಏನು ಮಾಡುವುದು ಎಂದು ಅಧ್ಯಕ್ಷರು ಹೇಳಿದರು. ಸಾಮಾನ್ಯ ಸಭೆ ಬಹಿಷ್ಕರಿಸುತ್ತಿದ್ದೇವೆ ಎಂದು ಸದಸ್ಯರು ಹೊರನಡೆದರು.