

ಮೂಡಿಗೆರೆ: ಎಂಟು ವರ್ಷದ ಹಿಂದೆ ಕಾಯ್ದಿರಿಸಿದ್ದ ಜಮೀನಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಹಳೇಮೂಡಿಗೆರೆ ಗ್ರಾಪಂ ಆಡಳಿತ ನಿರ್ಲಕ್ಷೃವಹಿಸಿದೆ. ನಿವೇಶನಕ್ಕೆ ತೆರಳಲು ರಸ್ತೆ ನಿರ್ಮಾಣ ಮಾಡಲು ಮುಂದಾಗಿಲ್ಲ ಎಂದು ವಸತಿಗಾಗಿ ಹೋರಾಟ ವೇದಿಕೆ ಗೌರವಾಧ್ಯಕ್ಷ ಬಿ.ರುದ್ರಯ್ಯ ಹೇಳಿದರು.
ಹಳೇಮೂಡಿಗೆರೆ ಗ್ರಾಪಂ ಕಚೇರಿ ಎದುರು ವಸತಿಗಾಗಿ ಹೋರಾಟ ವೇದಿಕೆಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶುಕ್ರವಾರ ಮಾತನಾಡಿದರು.
2017ರಲ್ಲಿ ವಸತಿಗಾಗಿ ಹೋರಾಟ ವೇದಿಕೆಯಿಂದ ಹಳೇಮೂಡಿಗೆರೆ ಗ್ರಾಪಂ ವ್ಯಾಪ್ತಿಯ ಸರ್ವೇ ನಂ.7ರಲ್ಲಿ ಕಂದಾಯ ಭೂಮಿ ಪತ್ತೆ ಹಚ್ಚಿ 200 ಕುಟುಂಬ ಗುಡಿಸಲು ನಿರ್ಮಿಸಿಕೊಂಡು ಅದೇ ಗುಡಿಸಲಿನಲ್ಲಿ ವಾಸಿಸುತ್ತ ಅದೇ ಜಾಗವನ್ನು ನಿವೇಶನ ಮಾಡಿ ನೀಡುವಂತೆ ಹೋರಾಟ ನಡೆಸುತ್ತ ಬಂದಿದ್ದೇವೆ. ಫಲಾನುಭವಿಗಳು ಗುಡಿಸಲು ನಿರ್ಮಿಸಿ ವಾಸಿಸುತ್ತಿರುವ ಜಾಗವನ್ನು ಶ್ರೀಮಂತರೊಬ್ಬರು ಒತ್ತುವರಿ ಮಾಡಿಕೊಂಡಿದ್ದರು. ನಿವೇಶನ ಫಲಾನುಭವಿಗಳು ಮತ್ತು ಒತ್ತುವರಿದಾರರ ನಡುವೆ ಹಲವು ಬಾರಿ ಸಂಘರ್ಷ ನಡೆದಿದೆ. ಈ ನಡುವೆ ಜಿಲ್ಲಾಡಳಿತ ಸರ್ವೇ ನಡೆಸಿದಾಗ 7.30 ಎಕರೆ ಕಂದಾಯ ಭೂಮಿ ಇರುವುದು ಗೊತ್ತಾಗಿದೆ. ಅದರಲ್ಲಿ 4.30 ಎಕರೆ ಆಶ್ರಯ ನಿವೇಶನಕ್ಕೆ ಕಾಯ್ದಿಸಲಾಗಿದೆ. ಆ ಜಾಗಕ್ಕೆ ಗ್ರಾಪಂನಿಂದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶಾಸಕರ ಅನುದಾನದಿಂದ ಗಿಡಗಂಟಿ ತೆರವುಗೊಳಿಸಿ ಜಾಗವನ್ನು ಸಮತಟ್ಟು ಮಾಡಲಾಗಿದೆ. ಆದರೆ ಇದುವರೆಗೂ ಆ ಜಾಗಕ್ಕೆ ತೆರಳಲು ಮುಖ್ಯರಸ್ತೆಯಿಂದ ರಸ್ತೆ ನಿರ್ಮಿಸಿಲ್ಲ. ಇದು ಹಳೇಮೂಡಿಗೆರೆ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ ತೋರಿಸುತ್ತಿದೆ. ಗ್ರಾಪನಿಂದ ನಿವೇಶನರಹಿತ ಫಲಾನುಭವಿಗಳ ಪಟ್ಟಿ ಇದುವರೆಗೂ ತಯಾರಿಸಿಲ್ಲ ಎಂದು ದೂರಿದರು.
ನಿವೇಶನರಹಿತ ಫಲಾನುಭವಿಗಳ ಪಟ್ಟಿ ತಯಾರಿಸಲು ತುರ್ತು ಗ್ರಾಮಸಭೆ ಆಯೋಜಿಸಬೇಕು. ಅರ್ಹರ ಪಟ್ಟಿ ತಯಾರಿಸುವಾಗ ಹೋರಾಟದಲ್ಲಿ ಪಾಲ್ಗೊಂಡಿರುವ ಸ್ಥಳೀಯರನ್ನೇ ಆಯ್ಕೆ ಮಾಡಬೇಕು. ಫಲಾನುಭವಿಗಳ ಆಯ್ಕೆಯಲ್ಲಿ ವಿವಿಧ ಜಾತಿ, ಧರ್ಮ, ಭಾಷೆ ಪರಿಗಣಿಸಿ ಭ್ರಷ್ಟಾಚಾರರಹಿತ ಪಾರದರ್ಶಕ ಆಯ್ಕೆ ನಡೆಯಬೇಕು. ನಿವೇಶನ ಜಾಗಕ್ಕೆ ಜೈಭೀಮ್ ನಗರವೆಂದು ನಾಮಕರಣ ಮಾಡಬೇಕು. ಅಲ್ಲದೆ ಧರಣಿ ನಡೆಸುತ್ತಿರುವ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ನಮ್ಮ ಸಮಸ್ಯೆಯನ್ನು ಬಗೆಹರಿಸುವವರೆಗೂ ಧರಣಿ ಹಿಂಪಡೆಯುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ನಿರಂತರವಾಗಿ ಧರಣಿ ನಡೆಸಿದ್ದರಿಂದ ಗೋಪಿ (55) ಎಂಬುವವರು ನಿತ್ರಾಣಗೊಂಡು ಧರಣಿ ನಡೆಸುತ್ತಿದ್ದ ಹಳೇಮೂಡಿಗೆರೆ ಗ್ರಾಪಂ ಕಚೇರಿ ಎದುರು ಕುಸಿದು ಬಿದ್ದರು. ಅವರನ್ನು ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಸಂಜೆ ಹೊತ್ತಿಗೆ ಚೇತರಿಸಿಕೊಂಡರು.
ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಶಿವಪ್ಪ, ಜಾನಕಿ, ಆಯಿಷಾ ಭಾನು, ಉನೈಸಾ, ಶಾರದಾ, ವನಜಾ, ಚಂದ್ರು ಶೆಟ್ಟಿ, ರಾಮು, ಶೇಖರ್, ಮಂಜುಳಾ, ಯಶೋದಾ, ಪ್ರಮೀಳಾ, ನಾಗಮ್ಮ, ಗೀತಾ, ಲಲಿತಾ, ಗೋಪಿ ಇತರರಿದ್ದರು.