ಗ್ರಾಪಂ ಸದಸ್ಯನ ವಿರುದ್ಧ ಪಿಡಿಒ ದೂರು

Published on

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಪಿಡಿಒ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗ್ರಾಪಂ ಸದಸ್ಯನ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೊನ್ನೂರು ಗ್ರಾಪಂನಲ್ಲಿ ಮೇ 16 ರಂದು ಸಾಮಾನ್ಯ ಸಭೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕ್ರಿಯಾ ಯೋಜನೆಯ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಎನ್. ರಾಜೇಶ್ ನಮಗೆ ಯಾವುದೇ ಕೆಲಸವನ್ನು ನೀಡುತ್ತಿಲ್ಲ ಎಂದು ತಗಾದೆ ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿನ ಪಿಡಿಒ ಎನ್. ನಿರಂಜನ್‌ಕುಮಾರ್ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ಅಲ್ಲದೆ ನಡಾವಳಿ ಪುಸ್ತಕವೂ ಸೇರಿದಂತೆ ಪಂಚಾಯಿತಿಯ ಇತರ ದಾಖಲಾತಿಗಳನ್ನು, ಕಚೇರಿಯ ಚೇರ್‌ಗಳನ್ನು ಬೀಸಾಡಿದ್ದಾರೆ. ಜತೆಗೆ ಕೊಲೆ ಬೆದರಿಕೆಯನ್ನು ಹಾಕಿದ್ದಾರೆ. ಈ ಬಗ್ಗೆ ನಾನು ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದು, ನಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದೇನೆ ಎಂದು ಪಿಡಿಒ ಎನ್.ನಿರಂಜನ್‌ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮವನ್ನು ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net