

ಮಳವಳ್ಳಿ: ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲರಾಗಿರುವ ಕಗ್ಗಲೀಪುರ ಗ್ರಾಮ ಪಂಚಾಯಿತಿ ಸದಸ್ಯೆ ಬಿ.ಎನ್. ಮಹಾಲಕ್ಷ್ಮೀ ಅವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಕಿರಗಸೂರು ಗ್ರಾಮದ ಮುಖಂಡರಾದ ಕೆ. ಶಿವಲಿಂಗೇಗೌಡ ಹಾಗೂ ಎಚ್. ರಾಜಣ್ಣ ಒತ್ತಾಯಿಸಿದರು.
ಗ್ರಾಮದ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಬಿ.ಎನ್. ಮಹಾಲಕ್ಷ್ಮೀ ಅವರನ್ನು ಚುನಾಯಿಸಿ ಕಗ್ಗಲೀಪುರ ಗ್ರಾಪಂಗೆ ಆಯ್ಕೆ ಮಾಡಲಾಗಿತ್ತು. ಆದರೆ ಇವರು ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ರೀತಿಯಲ್ಲೂ ಜನರಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಚರಂಡಿ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ ಗ್ರಾಮದಲ್ಲಿ ಉಲ್ಬಣವಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ತಾತ್ಸಾರ ಹಾಗೂ ಸ್ವಪ್ರತಿಷ್ಠೆ ಮಾತುಗಳನ್ನಾಡುತ್ತಾರೆ. ಅಲ್ಲದೆ ಚುನಾಯಿತರಾದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದಿರುವ 8 ಗ್ರಾಮ ಸಭೆಗಳಲ್ಲಿ 6 ಸಭೆಗಳಿಗೆ ಗೈರಾಗುವ ಮೂಲಕ ಪಂಚಾಯತ್ ರಾಜ್ ನಿಯಮ ಉಲ್ಲಂಘಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅವರು ಸಭೆಗೆ ಗೈರಾಗಿರುವುದು, ಅಭಿವೃದ್ಧಿ ಕಾರ್ಯಗಳು ನಡೆಯದಿರುವ ಬಗ್ಗೆ ಆಟಿಐ ಮೂಲಕ ಮಾಹಿತಿ ಪಡೆದುಕೊಂಡು ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಇಒಗೆ ದೂರು ನೀಡಲಾಗಿದೆ. ಕೂಡಲೇ ಸಂಬಧಪಟ್ಟವರು ಗ್ರಾಪಂ ಸದಸ್ಯೆ ಬಿ.ಎನ್. ಮಹಾಲಕ್ಷ್ಮೀ ಸದಸ್ಯತ್ವವನ್ನು ಅನರ್ಹಗೊಳಿಸಬೇಕು. ಇಲ್ಲವಾದಲ್ಲಿ ಜ.11 ರಂದು ಗ್ರಾಮಸ್ಥರೊಡಗೂಡಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.