

ಬಳ್ಳಾರಿ : ವಿವಿಧ ಇಲಾಖೆಗಳ ನೀಡುವ ಫಲಾನುಭವಿ ಮತ್ತು ಸಮುದಾಯ ಆಧಾರಿತ ಯೋಜನೆಗಳನ್ನು ಅರ್ಹ ಅಲ್ಪಸಂಖ್ಯಾತರಿಗೆ ತಲುಪಿಸಲು ಅಧಿಕಾರಿಗಳು ಗ್ರಾಪಂ ಮಟ್ಟದಲ್ಲಿ ಸಭೆ ಆಯೋಜಿಸಿ ಮಾಹಿತಿ ನೀಡಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ನಗರದ ಡಿಸಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಯೋಜನೆಗಳ ತಲುಪಿಸುವ ವಿವಿಧ ಇಲಾಖೆ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಮಾಡಬೇಕು. ಅರ್ಹರಿಗೆ ಸೌಲಭ್ಯ ದೊರೆಯುವದಲ್ಲದೆ, ಹೊಸ ಫಲಾನುಭವಿಗಳಿಗೆ ಅವಕಾಶ ನೀಡಬೇಕು ಎಂದರು. ವಿವಿಧ ಇಲಾಖೆಗಳಲ್ಲಿನ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯ ಮತ್ತು ಯೋಜನೆಗಳಲ್ಲಿ ಪ್ರಗತಿ ಸಾಧಿಸಬೇಕು. 2024-25 ನೇ ಸಾಲಿಗೆ ನಿಗಧಿತ ಗುರಿಗೆ ಎಲ್ಲ ಇಲಾಖೆಗಳು ಕ್ರಿಯಾಯೋಜನೆ ರೂಪಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಇದೆ ವೇಳೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅಲ್ಪಸಂಖ್ಯಾತರ ಸಮುದಾಯದವರಿಗೆ ಸಮರ್ಪಕವಾಗಿ ತಲುಪುತ್ತಿದೆಯೇ ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ವಿಚಾರಿಸಿದರು