ಗ್ರಾಪಂ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್

18-klr-1
Published on

ಕೋಲಾರ: ಕರೊನಾ ನಿಯಂತ್ರಣ ಸಂಬಂಧ ಗ್ರಾಪಂ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುತ್ತಿದ್ದು, ಗ್ರಾಮ ಮಟ್ಟದಲ್ಲಿ ಟಾಸ್ಕ್‌ಪೋರ್ಸ್ ರಚಿಸಿ 15-20 ದಿನಗಳಲ್ಲಿ ಕರೊನಾಮುಕ್ತ ಗ್ರಾಮವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಜಿಲ್ಲಾಡಳಿತ ಭವನದ ಎನ್‌ಐಸಿ ಕೇಂದ್ರದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಜತೆಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 100ಕ್ಕಿಂತ ಜಾಸ್ತಿ ಕರೊನಾ ಪ್ರಕರಣಗಳಿರುವ 463 ಜಿಲ್ಲೆಗಳ ಡಿಸಿ ಜತೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ರಾಜ್ಯದ 17 ಜಿಲ್ಲೆಗಳ ಡಿಸಿಗಳು ಭಾಗಿಯಾಗಿದ್ದರು. ಕರೊನಾ ನಿಯಂತ್ರಣಕ್ಕೆ ಪ್ರಧಾನಿ ಹಾಗೂ ಗೃಹಸಚಿವರು ಹಲವು ನಿರ್ದೇಶನ ನೀಡಿದ್ದಾರೆ ಎಂದರು.

ಜಿಲ್ಲೆಗೆ ಸಂಬಂಧಿಸಿದಂತೆ 5000ಕ್ಕೂ ಹೆಚ್ಚು ಮಂದಿ ಹೋಂ ಐಸೊಲೇಷನ್‌ನಲ್ಲಿದ್ದು, ಆರೋಗ್ಯ ಕಾರ್ಯಕರ್ತೆಯರು ಪ್ರತಿದಿನ ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ವಿಚಾರಿಸುವಂತೆ, ಎರಡು ದಿನಕ್ಕೊಮ್ಮೆ ಮನೆಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದರು.

ಟಾಸ್ಕ್‌ಪೋರ್ಸ್ ಸಮಿತಿ: ಪ್ರತಿ ಗ್ರಾಮ ಮಟ್ಟದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ರಚಿಸಿ ಹೋಂ ಐಸೋಲೇಷನ್‌ನಲ್ಲಿರುವವರು ಮನೆಯಲ್ಲಿದ್ದಾರೆಯೇ ಎಂದು ಪರಿಶೀಲಿಸಬೇಕು, ಮನೆಯಲ್ಲಿ ವ್ಯವಸ್ಥೆ ಸರಿಯಿಲ್ಲ ಅಥವಾ ಹೊರಗೆ ಓಡಾಡುತ್ತಿದ್ದರೆ ಗ್ರಾಪಂ ಮಟ್ಟದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದರು.

ಕರೊನಾಮುಕ್ತ ಗ್ರಾಮ: ಗ್ರಾಪಂ ಟಾಸ್ಕ್‌ಪೋರ್ಸ್, ಗ್ರಾಮಮಟ್ಟದ ಟಾಸ್ಕ್‌ಪೋರ್ಸ್‌ನಲ್ಲಿ ಪಕ್ಷಭೇದ ಮರೆತು ಭಾಗವಹಿಸಿ ಮುಂದಿನ 15ರಿಂದ 20 ದಿನಗಳಲ್ಲಿ ಕರೊನಾಮುಕ್ತ ಗ್ರಾಮವನ್ನಾಗಿಸಬೇಕೆಂಬ ಗುರಿ ಹೊಂದಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ವಹಣೆ ಮಾಡಲಿದೆ ಎಂದರು.

3 ತಾಲೂಕುಗಳಲ್ಲಿ ಕಠಿಣ ರೂಲ್ಸ್: ಕೋಲಾರ, ಮಾಲೂರು ಮತ್ತು ಕೆಜಿಎಫ್‌ನಲ್ಲಿ ಹೆಚ್ಚು ಕರೊನಾ ಪ್ರಕರಣಗಳಿರುವುದರಿಂದ ಲಾಕ್‌ಡೌನ್ ಕಠಿಣಗೊಳಿಸುವ ಸಂಬಂಧ ಜಿಲ್ಲಾಡಳಿತ ರೂಪುರೇಷೆ ಸಿದ್ಧಪಡಿಸಲಿದೆ ಎಂದರು.

ಕಾಳಜಿ ಕೇಂದ್ರ: ಸಮಾಜದ ಸಂಘಟನೆ, ಆಶ್ರಮ, ಸಂಘ-ಸಂಸ್ಥೆ, ಮಸೀದಿ, ಎನ್‌ಜಿಒಗಳು ಕಾಳಜಿ ಕೇಂದ್ರ ನಡೆಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆರೋಗ್ಯ ಸೇವೆಗೆ ಬಳಸಿಕೊಳ್ಳುವ ವೈದ್ಯರು, ಆರೋಗ್ಯ ಕಾರ್ಯಕರ್ತೆಯರಿಗೆ ಸರ್ಕಾರದಿಂದಲೇ ಗೌರವ ಸಂಭಾವನೆ ನೀಡಲಾಗುವುದು ಎಂದರು. ಜಿಲ್ಲೆಯಲ್ಲಿ 30 ಕೈಗಾರಿಕೆಗಳು ಅವಶ್ಯಕ ಸೇವೆಯಡಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕರನ್ನು ಕರೊನಾ ಪರೀಕ್ಷೆಗೆ ಒಳಪಡಿಸಿ ಪಾಸಿಟಿವ್ ಬಂದವರಿಗೆ ಕೋವಿಡ್ ಕೇರ್ ಸೆಂಟರ್ ತೆರೆದು ಚಿಕಿತ್ಸೆ ನೀಡಲು ಜಿಲ್ಲಾಧಿಕಾರಿ ಸೂಚನೆ ನೀಡಲಿದ್ದಾರೆ ಎಂದರು.

ಪರೀಕ್ಷೆ ಹೆಚ್ಚಿಸಲು ಕ್ರಮ: ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ ಪ್ರತಿದಿನ 1200-1500 ಮಾದರಿ ಪರೀಕ್ಷಿಸಲಾಗುತ್ತಿದ್ದು, ಇನ್ನೂ 300 ಜಾಸ್ತಿ ಮಾಡಿ 1800ರವರೆಗೆ ಪರೀಕ್ಷೆ ನಡೆಸುವುದು, ಕೆಜಿಎಫ್‌ನ ಸಂಭ್ರಮ್ ಲ್ಯಾಬೋರೇಟರಿಯಲ್ಲಿ ನಿತ್ಯ 1000 ಪರೀಕ್ಷೆಗೆ ಅವಕಾಶ ಕಲ್ಪಿಸುವುದು, ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ 300 ಮಾದರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ವ್ಯವಸ್ಥೆಯಲ್ಲಿ ಕೋಲಾರ ಜಿಲ್ಲೆಯ ಕೇಸ್ ವರದಿ ಸಾಧ್ಯವೇ ಎಂದು ಪರಿಶೀಲಿಸಿ ಒಟ್ಟಾರೆ ಪ್ರತಿದಿನ 4000ಕ್ಕೂ ಹೆಚ್ಚು ಮಾದರಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ಲಸಿಕೆ ವಿತರಣೆ: ರಾಜ್ಯದಲ್ಲಿ ಕೋವ್ಯಾಕ್ಸಿನ್ ಕೊರತೆ ಇದೆ. ಮೊದಲ ಡೋಸ್ ತೆಗೆದುಕೊಂಡವರಿಗೆ 2ನೇ ಡೋಸ್ ನೀಡಲಾಗುವುದು, ಎರಡ್ಮೂರು ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪರ್ಕಿಸಬಹುದು ಎಂದ ಸಚಿವರು, 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಮೊದಲ ಡೋಸ್ ನೀಡಲಾಗುವುದು ಎಂದರು.

ವಿಡಿಯೋ ಕಾನ್ಫ್‌ರೆನ್ಸ್‌ನಲ್ಲಿ ಡಿಸಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಎಂ.ನಾಗರಾಜ್, ಕೋಲಾರ ಎಸ್ಪಿ ಕಾರ್ತಿಕ್‌ರೆಡ್ಡಿ, ಕೆಜಿಎಫ್ ಎಸ್ಪಿ ಇಲಾಕಿಯಾ ಕರುಣಾಕರನ್, ಎಡಿಸಿ ಡಾ.ಸ್ನೇಹಾ ವಿ.ಸಿ. ತಹಸೀಲ್ದಾರ್ ಶೋಭಿತಾ, ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್, ಜಿಲ್ಲಾ ಸರ್ಜನ್ ಡಾ. ಜಗದೀಶ್ ಉಪಸ್ಥಿತರಿದ್ದರು.

ಬ್ಲ್ಯಾಕ್ ಫಂಗಸ್‌ಗೆ 30 ಹಾಸಿಗೆ ವಾರ್ಡ್: ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ವಿಶೇಷ ವಾರ್ಡ್ ಪ್ರಾರಂಭಿಸಲು ಮನವಿ ಮಾಡಲಾಗಿ 30 ಹಾಸಿಗೆಯ ವಿಶೇಷ ವಾರ್ಡ್ ಆರಂಭಿಸಲು ಸಮ್ಮತಿಸಿದ್ದಾರೆ ಎಂದ ಸಚಿವರು, ಚಿಕಿತ್ಸೆಗೆ ಔಷಧ ದುಬಾರಿಯಾಗಿರುವುದರಿಂದ ಬಿಪಿಎಲ್ ಕುಟುಂಬಕ್ಕೆ ಉಚಿತ ಚಿಕಿತ್ಸೆ ಒದಗಿಸಲು ಸರ್ಕಾರ ಚಿಂತಿಸಿದೆ. ಯಾವುದೇ ಪ್ರಕರಣಗಳಾದರೂ ಚಿಕಿತ್ಸೆ ನೀಡಬೇಕು. ಅವಶ್ಯವಿರುವ ಔಷಧವನ್ನು ಸರ್ಕಾರ ಒದಗಿಸಲಿದೆ ಎಂದರು.

ಲಸಿಕೆ ಪ್ರಮಾಣ ಹೆಚ್ಚಿಸಲು ಕ್ರಮ: ಜಿಲ್ಲೆಯಲ್ಲಿ ಕರೊನಾ ಹೆಚ್ಚಿರುವ ಕಡೆ ಸೀಲ್‌ಡೌನ್‌ಗೆ ಕ್ರಮ ವಹಿಸಲಾಗುವುದು. ಲಸಿಕೆ ಪ್ರಮಾಣ ಹೆಚ್ಚಳ, ಲಸಿಕೆ ವೇಸ್ಟೇಜ್ ಶೂನ್ಯಕ್ಕೆ ಇಳಿಸುವುದು, ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಿ ಆಮ್ಲಜನಕದ ಕೊರತೆ ಉಂಟಾಗದಂತೆ ಕ್ರಮ ವಹಿಸುವುದು, 15 ದಿನಗಳಿಗೆ ಅವಶ್ಯವಿರುವಷ್ಟು ಲಸಿಕೆ ತರಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಗ್ರಾಪಂನಿಂದ ಶಾಲೆ, ಸಮುದಾಯ ಭವನ ಅಥವಾ ಪಂಚಾಯಿತಿ ಕಟ್ಟಡಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಬಹುದು. ಹೋಂ ಐಸೋಲೇಷನ್ ಸಂಖ್ಯೆ ಕಡಿಮೆ ಮಾಡಲು ತೀರ್ಮಾನಿಸಲಾಗಿದೆ ಎಂದು ಡಿಸಿ ಡಾ. ಆರ್. ಸೆಲ್ವಮಣಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net