ಗ್ರಾಪಂ ಮಟ್ಟದಲ್ಲಿ ಕೊಂದು-ಕೊರತೆ ಸಭೆ

Published on

ಚಾಮರಾಜನಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಮತ್ತು ಕುಂದು- ಕೊರತೆ ನಿವಾರಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸಲಾಗುವುದು ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಲ್ಲೂರು ಸೋಮೇಶ್ವರ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕುಮಟ್ಟದ ಗ್ಯಾರಂಟಿ ಯೋಜನೆಗಳ ಮಾಸಿಕ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಇರಬೇಕು. ಗ್ರಾಮೀಣ ಪ್ರದೇಶದ ಜನರಿಗೆ ಯೋಜನೆ ತಲುಪಬೇಕೆಂದರು.

ಸಮಿತಿಯ ಸದಸ್ಯ ಮಾದಾಪುರ ಕುಮಾರ್ ಮಾತನಾಡಿ, ಹಳ್ಳಿಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸೂಕ್ತ ಸೌಲಭ್ಯ ನೀಡುತ್ತಿಲ್ಲ. ಶಕ್ತಿ ಯೋಜನೆಯಡಿ ಪ್ರಯಾಣ ಮಾಡುವ ಮಹಿಳೆಯರಿಗೆ ಕೆಲವು ಚಾಲಕರು ಮತ್ತು ನಿರ್ವಾಹಕರು ಅಗೌರವ ತೋರುತ್ತಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಉತ್ತರ ನೀಡಬೇಕಿದ್ದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಭೆಗೆ ಗೈರಾಗಿದ್ದರು.

ಸಭೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಗಂಭೀರ ಚರ್ಚೆ ನಡೆಯಿತು. ಇದಕ್ಕೆ ಅಧ್ಯಕ್ಷ ಸೋಮೇಶ್ವರ್ ಆಹಾರ ಇಲಾಖೆಯ ನಿರೀಕ್ಷ ಚಿಕ್ಕಣ್ಣಗೆ ಸೂಚನೆ ನೀಡಿ, ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಭೆ ಕರೆದು ಪಡಿತರ ಅಕ್ಕಿ ಮಾರಾಟ ಮಾಡಿದವರಿಗೆ ಒಂದೆರಡು ತಿಂಗಳು ಪಡಿತರ ವಿತರಿಸದಂತೆ ಎಚ್ಚರಿಕೆ ನೀಡುವಂತಹ ಪ್ರಕಟಣೆಗಳನ್ನು ಹಾಕಲು ತಿಳಿಸಿದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಚಿನ್ನಸ್ವಾಮಿ, ಆರ್.ರಾಜು, ಕುಮಾರ್, ಮಂಜುಳಾ, ಮಲ್ಲಿಕಾರ್ಜುನ್, ಎಂ.ಕುಮಾರ್, ಸಿದ್ದಿಕ್, ರಮೇಶ್, ರಂಗಸ್ವಾಮಿ, ತಾ.ಪಂ ಇಒ ಗಿರಿಧರ್, ಸಿಬ್ಬಂದಿ ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net