

ಬೀದರ್: ಜಿಲ್ಲೆಯಲ್ಲಿ ಮಂಗಳವಾರ (ಡಿ.22) ನಡೆಯಲಿರುವ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಅಂತ್ಯವಾಗಿದ್ದು, ಅಭ್ಯರ್ಥಿಗಳು ಈಗ ಮನೆ, ಮನೆ ಪ್ರಚಾರಕ್ಕೆ ಸೈ ಎಂದಿದ್ದಾರೆ.
ಮೊದಲ ಹಂತದಲ್ಲಿ ಜಿಲ್ಲೆಯ ಐದು ತಾಲೂಕುಗಳ 106 ಗ್ರಾಪಂಗಳ 1866 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಣದಲ್ಲಿ 5286 ಅಭ್ಯರ್ಥಿಗಳಿದ್ದಾರೆ. ಅಬ್ಬರದ ಪ್ರಚಾರ ಮುಗಿಸಿರುವ ಅಭ್ಯರ್ಥಿಗಳು, ಗೆಲ್ಲಲು ಅಂತಿಮ ಕಸರತ್ತು ನಡೆಸುತ್ತಿದ್ದಾರೆ.
ಬಸವಕಲ್ಯಾಣ ತಾಲೂಕಿನ 31 ಗ್ರಾಪಂನ 578 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ, 33 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 544 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 1671 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹುಲಸೂರ ತಾಲೂಕಿನ 4 ಗ್ರಾಪಂನ 77 ಸ್ಥಾನಗಳ ಪೈಕಿ 5 ಅವಿರೋಧ ಆಯ್ಕೆಯಾಗಿದ್ದು, 72 ಸ್ಥಾನಗಳಿಗೆ ನಡೆಯುವ ಚುನಾವಣೆಗೆ 204 ಅಭ್ಯರ್ಥಿ ಸ್ಪರ್ಧಿಸಿದ್ದಾರೆ.
ಹುಮನಾಬಾದ್ ತಾಲೂಕಿನ 19 ಗ್ರಾಪಂನ 350 ಸ್ಥಾನಗಳ ಪೈಕಿ 7 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿಲ್ಲ, 18 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 325 ಸ್ಥಾನಗಳಿಗಾಗಿ 1117 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿಟಗುಪ್ಪ ತಾಲೂಕಿನ 12 ಗ್ರಾಪಂನ 249 ಸ್ಥಾನಗಳ ಪೈಕಿ ಐವರು ಅವಿರೋಧ ಆಯ್ಕೆಯಾಗಿದ್ದಾರೆ. ಅಂತಿಮವಾಗಿ 787 ಅಭ್ಯರ್ಥಿಗಳು ಇದ್ದಾರೆ. ಭಾಲ್ಕಿ ತಾಲೂಕಿನ 40 ಗ್ರಾಪಂಗಳ 612 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ, 56 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 1507 ಅಭ್ಯರ್ಥಿ ಕಣದಲ್ಲಿದ್ದಾರೆ. ಸ್ಪರ್ಧೆಯಲ್ಲಿ 1523 ಎಸ್ಸಿ, 889 ಎಸ್ಟಿ, 260 ಹಿಂದುಳಿದ ವರ್ಗ (ಅ), 71 ಹಾಗೂ 2543 ಅಭ್ಯರ್ಥಿಗಳು ಸಾಮಾನ್ಯ ವರ್ಗಕ್ಕೆ ಸೇರಿದ್ದಾರೆ.
ಸಂತೆ, ಜಾತ್ರೆ ನಿಷೇಧ
ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಗ್ರಾಪಂ ಕ್ಷೇತ್ರ ವ್ಯಾಪ್ತಿಗೆ ಅನ್ವಯಿಸುವಂತೆ ಡಿ.22 ಮತ್ತು 27 ರಂದು ಎಲ್ಲ ತರಹದ ಸಂತೆ ಹಾಗೂ ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ರಾಮಚಂದ್ರನ್ ಆದೇಶ ಹೊರಡಿಸಿದ್ದಾರೆ. ಬಸವಕಲ್ಯಾಣ, ಹುಲಸೂರ, ಭಾಲ್ಕಿ, ಹುಮನಾಬಾದ್ ಮತ್ತು ಚಿಟಗುಪ್ಪಾ ತಾಲ್ಲೂಕುಗಳಲ್ಲಿ 22ರಂದು ಮತದಾನ ನಡೆಯಲಿದೆ. ಬೀದರ್, ಔರಾದ್ ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ 27ರಂದು ಮತದಾನವಿದೆ. 30 ರಂದು ಆಯಾ ತಾಲೂಕಿನ ಕೇಂದ್ರಗಳಲ್ಲಿ ಮತ ಎಣಿಕೆ ಇದೆ. ಚುನಾವಣೆ ಮುಕ್ತ, ಶಾಂತಿಯುತ ಹಾಗೂ ನ್ಯಾಯಸಮ್ಮತ ಜರುಗಿಸುವ ನಿಟ್ಟಿನಲ್ಲಿ ಎಲ್ಲ ತರಹದ ಸಂತೆ ಹಾಗೂ ಜಾತ್ರೆ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಮತದಾನ ನಡೆಯುವ ವೇಳೆ ಮತಕೇಂದ್ರದ 100 ಮೀಟರ್ ವ್ಯಾಪ್ತಿಯೊಳಗಡೆ ಕಲಂ 144ರನ್ವಯ ಚುನಾವಣೆಗೆ ಸಂಬಂಧಪಟ್ಟ ಮತದಾರರು ಹಾಗೂ ಸಿಬ್ಬಂದಿ ಹೊರತುಪಡಿಸಿ ಇತರರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ಮದ್ಯ ಮಾರಾಟ ನಿಷೇಧಿಸಿ ಆದೇಶ
ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ಮತ್ತು ಸಾಗಣೆ ನಿಷೇಧಿಸಿ ಜಿಲ್ಲಾಧಿಕಾರಿ ರಾಮಚಂದ್ರನ್ ಆದೇಶ ಹೊರಡಿಸಿದ್ದಾರೆ. ಡಿ.22ರಂದು ಮೊದಲ ಹಂತದಲ್ಲಿ ಬಸವಕಲ್ಯಾಣ, ಹುಲಸೂರ, ಭಾಲ್ಕಿ, ಹುಮನಾಬಾದ್ ಮತ್ತು ಚಿಟಗುಪ್ಪ ತಾಲೂಕುಗಳಲ್ಲಿ ಮತದಾನ ನಡೆಯಲಿದೆ. ಈ 5 ತಾಲೂಕುಗಳಲ್ಲಿ (ಸಂಪೂರ್ಣ) ಮತ್ತು ಕಮಲನಗರ, ಔರಾದ್ ಹಾಗೂ ಬೀದರ್ ತಾಲೂಕುಗಳ ಗಡಿ ಭಾಗದ 5 ಕಿ.ಮೀ. ವ್ಯಾಪ್ತಿಯಲ್ಲಿ (ಚುನಾವಣೆ ನಡೆಯಲಿರುವ ತಾಲೂಕುಗಳಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ) 20 ರಂದು ಸಂಜೆ 5 ಗಂಟೆಯಿಂದ 22ರ ಸಂಜೆ 5 ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಡಿ.27ರಂದು ಬೀದರ್, ಔರಾದ್ ಹಾಗೂ ಕಮಲನಗರ ತಾಲೂಕುಗಳಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಮೂರು ತಾಲೂಕುಗಳಲ್ಲಿ ಮತ್ತು ಭಾಲ್ಕಿ, ಹುಮನಾಬಾದ್, ಚಿಟಗುಪ್ಪ, ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕುಗಳ ಗಡಿಭಾಗದ 5 ಕಿ.ಮೀ. ವ್ಯಾಪ್ತಿಯಲ್ಲಿ (ಚುನಾವಣೆ ನಡೆಯಲಿರುವ ತಾಲೂಕುಗಳಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ) 25ರಂದು ಸಂಜೆ 5ರಿಂದ 27ರ ಸಂಜೆ 5 ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಲ್ಲ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕೇಂದ್ರದ 5 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ 29ರ ಮಧ್ಯರಾತ್ರಿ 12 ರಿಂದ 30ರ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೇತನ ಸಹಿತ ರಜೆ ಘೋಷಣೆ
22 ಮತ್ತು 27ರಂದು ಗ್ರಾಪಂ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೋಂದಾಯಿಸಿಕೊಂಡಿರುವ ಅರ್ಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲ ಮತ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳ ಶಾಲಾ ಕಾಲೇಜುಗಳ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಸರ್ಕಾರಿ ನೌಕರರಿಗೆ ಮತದಾನ ದಿನದಂದು ವೇತನ ಸಹಿತ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಅಥವಾ ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ಕಾಯಂ ಮತ್ತು ದಿನಗೂಲಿ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮತದಾನ ದಿನಾಂಕದಂದು ವೇನತ ಸಹಿತ ರಜೆಗೆ ಅರ್ಹರಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.