

ಕಾರವಾರ: ಗ್ರಾಪಂ ಚುನಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಲು ಸಿದ್ಧತೆ ನಡೆಸಿ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ತಾಲೂಕಿನ ಬರ್ಗಲ್ ಗ್ರಾಮದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ನಡೆಸುವ ಅಭ್ಯಾಸ ವರ್ಗಗಳು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ, ಲವಲವಿಕೆ, ಸಮಯ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಅಭ್ಯಾಸ ವರ್ಗವು ನಾಯಕರನ್ನು ಬೆಳೆಸುವ ಶಾಲೆ ಇದ್ದಂತೆ ಎಂದರು.
ಪಕ್ಷದ ಪ್ರಧಾನ ಕಾರ್ಯದರ್ಶಿಎನ್.ಎಸ್.ಹೆಗಡೆ, ಜಿಲ್ಲಾ ವಕ್ತಾರ ನಾಗರಾಜ ನಾಯಕ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಸುಭಾಷ ಗುನಗಿ, ಗ್ರಾಮೀಣ ಪಭಾರಿ ಗಜಾನನ ಗುನಗಾ, ರಾಜ್ಯ ಮೀನುಗಾರ ಪ್ರಕೋಷ್ಟಕದ ಸಹ ಸಂಚಾಲಕರಾದ ಗಣಪತಿ ಉಳ್ವೇಕರ್ ಇದ್ದರು.
ನಗರದ ಅಭಿವೃದ್ಧಿಗೆ ಬದ್ಧ: ನಗರದ ಅಭಿವೃದ್ಧಿಗೆ ಸದಾ ಸಿದ್ಧ ಅದಕ್ಕೆ ಜನರ ಸಹಕಾರ ಬೇಕು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು. ನಗರಸಭೆ ಅನುದಾನದಲ್ಲಿ ನಿರ್ವಣವಾಗುತ್ತಿರುವ ನ್ಯೂ ಕೆಎಚ್ಬಿ ಕಾಲನಿ ಹಾಗೂ ದೇವತಿಶಿಟ್ಟಾ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರವಾರ ನಗರದ 18 ಹಾಗೂ 25 ನೇ ವಾರ್ಡ್ನ ರಸ್ತೆಗಳಲ್ಲಿ ಬಹು ಜನ ಓಡಾಟ ನಡೆಸುತ್ತಾರೆ. ಜನರ ಬೇಡಿಕೆಯಂತೆ ಕಾಮಗಾರಿ ನಡೆಸಲಾಗುತ್ತಿದೆ. 18 ನೇ ವಾರ್ಡ್ನಲ್ಲಿ 6 ಲಕ್ಷ ರೂ. ಹಾಗೂ 25ನೇ ವಾರ್ಡ್ನಲ್ಲಿ 21.40 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸದಸ್ಯರಾದ ಉಲ್ಲಾಸ ಕೆಣಿ, ರವಿರಾಜ ಅಂಕೋಲೆಕರ್,ನಂದಾ ಸಾವಂತ, ಶಿಲ್ಪಾ ನಾಯ್ಕ, ಹನುಮಂತ ತಳವಾರ, ಅನುಶ್ರೀ ಕುಬಡೆ, ಮೀನುಗಾರ ಪ್ರಕೋಷ್ಟಕದ ರಾಜ್ಯ ಸಹ ಸಂಚಾಲಕರಾದ ಗಣಪತಿ ಉಳ್ವೇಕರ್ ಇದ್ದರು.