ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

Protest by locking the Gram Panchayat office
Protest by locking the Gram Panchayat office
Published on

ಹುನಗುಂದ: ತಾಲೂಕಿನ ಅಮರಾವತಿ ಗ್ರಾಮ ಪಂಚಾಯಿತಿ ಪಿಡಿಒ ಶಿಲ್ಪಾ ರ‌್ಯಾಕಿ ಗ್ರಾಮಸ್ಥರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಗುರುವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥ ಶರಣಪ್ಪ ಗೋಪಲಪ್ಪನವರ ಮಾತನಾಡಿ, ಕಳೆದ ಒಂದು ವರ್ಷದಿಂದ ಗ್ರಾಮದ ಜನರಿಗೆ ಎನ್‌ಆರ್‌ಇಜಿ ಜಾಬ್ ಕಾರ್ಡ್ ಮಾಡಿಕೊಡದೆ ಸತಾಯಿಸುತ್ತಿದ್ದಾರೆ. ಎನ್‌ಆರ್‌ಇಜಿ ಕೆಲಸ ನೀಡುತ್ತಿಲ್ಲ. ಕೆಲಸ ಮಾಡಿದ ಕಾರ್ಮಿಕರಿಗೆ ಸರಿಯಾಗಿ ಹಣ ಪಾವತಿಸುತ್ತಿಲ್ಲ, ದನದ ಕೊಟ್ಟಿಗೆ ನಿರ್ಮಿಸಿದ ರೈತರು ಮತ್ತು ಜನತಾ ಮನೆಗಳ ಫಲಾನುಭವಿಗಳಿಗೆ ಬಿಲ್ ಸರಿಯಾಗಿ ಪಾವತಿಸುತ್ತಿಲ್ಲ. ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್ ಕಚೇರಿಗೆ ಸರಿಯಾಗಿ ಬಾರದೆ ಜನರಿಗೆ ಕೈಗೆ ಸಿಗುತ್ತಿಲ್ಲ. ಗ್ರಾಮದಲ್ಲಿ ರಸ್ತೆ, ಚರಂಡಿ, ಶೌಚಗೃಹ ಸರಿಯಾಗಿ ಇಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಅವರ ಕಾರ್ಯವೈಖರಿ ಗ್ರಾಮದ ಜನರಿಗೆ ಬೇಸರ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ ಮಾತನಾಡಿ, ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಸಾರ್ವಜನಿಕರಿಗೆ ಪಿಡಿಒ ಗೌರವ ನೀಡುವುದಿಲ್ಲ. ಗ್ರಾಮದ ಜನರ ಕುಂದು ಕೊರತೆಯನ್ನು ಆಲಿಸುತ್ತಿಲ್ಲ. ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್‌ಗಳನ್ನು ಈ ಪಂಚಾಯಿತಿಯಿಂದ ಬೇರೆ ಕಡೆಗೆ ವರ್ಗಾವಣೆ ಮಾಡುವವರೆಗೆ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ಇಲ್ಲವಾದರೆ ಜಿಪಂ ಮುಖ್ಯಕಾರ್ಯನಿರ್ವಾಹಕರು ಪಂಚಾಯಿತಿಗೆ ಆಗಮಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ಆಗಮಿಸಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅವರಿಗೆ ದೂರವಾಣಿ ಮೂಲಕ ಗ್ರಾಮಸ್ಥರ ಸಮಸ್ಯೆಗಳನ್ನು ತಿಳಿಸಿದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಸಿಇಒ ಭರವಸೆ ನೀಡಿದ್ದರಿಂದ ಗ್ರಾಮಸ್ಥರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂದಕ್ಕೆ ಪಡೆದರು.

ಗ್ರಾಮಸ್ಥರಾದ ಮತ್ಯುಂಜಯ ಕಪರದ, ಮಹಾಂತೇಶ ಚಿತ್ತವಾಡಗಿ, ಮಂಜುನಾಥ ಹುನಕುಂಟಿ, ಆನಂದ ಹುನಕುಂಟಿ, ಮುತ್ತುರಾಜ ಗೌಡರ, ಅಜಯ ಕಂಬಳಿ, ಶಿವು ಗೌಡರ, ಬಸವರಾಜ ಗೋಲಪ್ಪನವರ, ಚಂದಪ್ಪ ಗೂಳಿ, ಶಶಿಕುಮಾರ ಗೋಲಪ್ಪನವರ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net