ಗ್ರಾಪಂ ಎದುರು ಪ್ರತಿಭಟನೆ

SRP_09-01(a)jpg
Published on

ಶ್ರೀರಂಗಪಟ್ಟಣ: ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ, ಶುಚಿತ್ವ ಕೈಗೊಳ್ಳಲು ಅರಕೆರೆ ಗ್ರಾಮ ಪಂಚಾಯಿತಿ ವಿಫಲವಾಗಿದೆ ಎಂದು ಆರೋಪಿಸಿ ಗ್ರಾಪಂ ಉಪಾಧ್ಯಕ್ಷ, ಸದಸ್ಯರು ಗ್ರಾಪಂ ಕಚೇರಿ ಬಂದ್ ಮಾಡಿ ಪ್ರತಿಭಟಿಸಿದರು.

ತಾಲೂಕಿನ ಅರಕೆರೆ ಪಂಚಾಯಿತಿ ಮುಂಭಾಗ ಶುಕ್ರವಾರ ಉಪಾಧ್ಯಕ್ಷ ಶಿವಮೂರ್ತಿ ನೇತೃತ್ವದಲ್ಲಿ ಸದಸ್ಯರು ಹಾಗೂ ಗ್ರಾಮಸ್ಥರು ಅಧ್ಯಕ್ಷೆ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೂರ್ತಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ನೀರುಗಂಟಿಗಳನ್ನು ವಿಚಾರಿಸಿದರೆ ಮೋಟಾರ್ ಸುಟ್ಟಿದೆ ಎಂಬ ನೆಪ ಹೇಳುತ್ತಾರೆ. ಕಳೆದ ಬೋರ್ಡ್‌ನಲ್ಲಿ 13 ಲಕ್ಷ ರೂ. ನೀಡಿ ಹೊಸ ಮೋಟಾರ್ ಖರಿದೀಸಿದ್ದರೂ 18 ತಿಂಗಳಿಂದ ಮೋಟಾರ್ ಬದಲಿಸಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಂಡಿಲ್ಲ. ಯಾವುದೇ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. 14 ಮತ್ತು 15ನೇ ಹಣಕಾಸು ಯೋಜನೆಯ ಅನುದಾನವನ್ನು ಚರ್ಚೆಗೆ ತರಲು ಸಾಮಾನ್ಯ ಸಭೆಗೆ ಅವಕಾಶ ನೀಡದೆ ಕಾಲ ದೂಡುತ್ತಿದ್ದಾರೆ ಎಂದು ದೂರಿದರು.

ವಿಷಯ ತಿಳಿದು ಸ್ಥಳಕ್ಕೆ ಅರಕೆರೆ ಠಾಣೆ ಪಿಎಸ್‌ಐ ರಸೂಲ್ ಸಾಬ್ ಅವರೊಂದಿಗೆ ಅಧ್ಯಕ್ಷೆ ಸವಿತಾ ನಾಗರಾಜು ಹಾಗೂ ಪಿಡಿಒ ಮೃತ್ಯುಂಜಯ ಆಗಮಿಸಿ ತಮ್ಮ ಕಾರ್ಯವೈಖರಿ ಬದಲಿಸಿಕೊಂಡು ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.ಸದಸ್ಯರಾದ ರಜಿನಿ, ಎಂ.ಕೆ.ಮಂಜುನಾಥ್, ದಯಾನಂದ್ ಸಾಗರ್, ವಿಜಯಾ, ಎ.ಆರ್.ಮೀನಾಕ್ಷಿ, ಎ.ಜೆ.ರವಿ, ಪುನೀತ, ನಿಂಗಮ್ಮ, ರಮೇಶ್ ಅಭಯ್, ದಿವಾಕರ್, ಸೌಮ್ಯಾ ಚುಂಚೇಗೌಡ, ಮಾಜಿ ಸದಸ್ಯೆ ಭವಾನಿ ರವಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಂತೋಷ್, ಕಾಂಗ್ರೆಸ್ ಮುಖಂಡರಾದ ಶಶಾಂಕ್, ಮುರುಳಿ, ಮರಿಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net