

ಕೊಳ್ಳೇಗಾಲ: ನೀರಿನ ತೊಂಬೆಯ ವಿಚಾರಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಗೆ ನೀರುಗಂಟಿ ಕಪಾಳಮೋಕ್ಷ ಮಾಡಿದ್ದಾರೆಂಬ ಆರೋಪದ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ರಾಚಶೆಟ್ಟಿ ದೊಡ್ಡಿಯ ಸೋಮಣ್ಣ ಎಂಬುವರ ಪತ್ನಿ ಹಾಗೂ ಗ್ರಾಪಂ ಉಪಾಧ್ಯಕ್ಷೆ ಶೋಭಾ ಹಲ್ಲೆಗೊಳಗಾದವರು. ಅದೇ ಗ್ರಾಮದ ನೀರುಗಂಟಿ ಶಿವರಾಜು ಹಲ್ಲೆ ಮಾಡಿರುವ ಆರೋಪ ಹೊತ್ತವರು. ಗುರುವಾರ ಗ್ರಾಮದ ತೊಂಬೆ ನಲ್ಲಿಯ ಬಳಿ ಬಂದ ಶಿವರಾಜ್ ತೊಂಬೆ ಸ್ವಚ್ಛತೆ ವಿಚಾರವಾಗಿ ಜನರನ್ನು ಅವಾಚ್ಯ ಶಬ್ದದಿಂದ ನಿಂದಿಸುತ್ತಿದ್ದ. ಇದನ್ನು ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಶೋಭಾ ಅವರಿಗೆ ಶಿವರಾಜ್ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ವಿರುದ್ಧ ಶೋಭಾ ದೂರು ನೀಡಿದ್ದಾರೆ.
ಪ್ರತಿ ದೂರು: ಶಿವರಾಜ್ ಪತ್ನಿ ಆಶಾ ಸಹ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ನನ್ನ ಗಂಡ ನೀರಿನ ತೊಂಬೆ ಬಳಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ತಿಳಿವಳಿಕೆ ನೀಡಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಶೋಭಾ ನನ್ನ ಗಂಡ ಹಾಗೂ ನನ್ನ ನಾದಿನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದುನ ಪತಿಯ ಪರವಾಗಿ ಪ್ರತಿದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಿವರಾಜ್‌ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.