ಗ್ರಾಪಂ ಅಧ್ಯಕ್ಷರ ದರ್ಬಾರ್!

17-RNR-01
Published on

ರಾಣೆಬೆನ್ನೂರ: ಲಾಕ್​ಡೌನ್ ಸಮಯದಲ್ಲಿ ಪರಿಸ್ಥಿತಿ ಅವಲೋಕಿಸಿ ಪಾಸ್ ಕೊಡುವ ಅಧಿಕಾರ ಜಿಲ್ಲಾಧಿಕಾರಿ, ತಹಸೀಲ್ದಾರ್ ಅವರಿಗೆ ಮಾತ್ರವಿದೆ. ಆದರೀಗ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಾವೇ ಸ್ವತಃ ಪಾಸ್ ಕೊಡುವ ಮೂಲಕ ದರ್ಬಾರ್ ಮಾಡುತ್ತಿದ್ದಾರೆ.

ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಪಂ ಅಧ್ಯಕ್ಷ ರಾಜು ಸುಣಗಾರ ಎಂಬುವರು ನಿಯಮ ಮೀರಿ ಪಾಸ್ ನೀಡಿದವರು.

‘ಆರಿಫುಲ್ಲಾ ಬಸೀರಸಾಬ್ ಉಡಗಣಿ ಎಂಬುವರಿಗೆ ಅನಾರೋಗ್ಯದ ಕಾರಣ ಅವರೊಂದಿಗೆ ಹರಮತ್ತುಲ್ಲಾ, ಹಸೀನಾಬಿ ಎಂಬುವವರು ರಾಣೆಬೆನ್ನೂರಿನ ಆಸ್ಪತ್ರೆಗೆ ಹೋಗಬೇಕಿದೆ. ಆದ್ದರಿಂದ ಕೆಎ-05-ಜಡ್-7470 ನಂಬರ್​ನ ಕಾರಿಗೆ ಅನುಮತಿ ನೀಡಿದೆ’ ಎಂದು ಗ್ರಾಪಂ ಲೇಟರ್​ಹೆಡ್​ನಲ್ಲಿ ಬರೆದು ಗ್ರಾಪಂ ಸೀಲ್ ಹಾಗೂ ಸಹಿ ಮಾಡಿ ನೀಡಲಾದ ಪತ್ರ ಹಿಡಿದುಕೊಂಡು ಚಾಲನಾ ಪರವಾನಗಿ ಹೊಂದಿರದ ಯುವಕನೊಬ್ಬ ಕಾರು ಚಲಾಯಿಸಿಕೊಂಡು ಬಂದಿದ್ದಾಗ ರಾಣೆಬೆನ್ನೂರಿನ ಬಸ್ ನಿಲ್ದಾಣದ ಎದುರಿನ ಚೆಕ್​ಪೋಸ್ಟ್​ನಲ್ಲಿ ಗುರುವಾರ ರಾತ್ರಿ ಪೊಲೀಸರು ತಡೆದಿದ್ದರು. ಪೊಲೀಸರು ದಾಖಲೆ ಪರಿಶೀಲಿಸಿದಾಗ ‘ನಮ್ಮ ಬಳಿ ಗ್ರಾಪಂ ಅಧ್ಯಕ್ಷರು ನೀಡಿದ ಪಾಸ್ ಇದೆ ನೋಡಿಕೊಳ್ಳಿ’ ಎಂದು ಯುವಕ ಎದುರುತ್ತರ ಕೊಟ್ಟಿದ್ದ. ಇದಕ್ಕೆಲ್ಲ ಗ್ರಾಪಂ ಅಧ್ಯಕ್ಷರು ಪಾಸ್ ಕೊಡಲು ಬರುವುದಿಲ್ಲ ಎಂದು ಪೊಲೀಸರು ತಿಳಿಹೇಳಿ ದಂಡ ಕಟ್ಟಿಸಿಕೊಂಡು ಕೈಬಿಟ್ಟಿದ್ದಾರೆ.

ಕ್ರಮಕ್ಕೆ ಒತ್ತಾಯ: ಗ್ರಾಪಂ ಅಧ್ಯಕ್ಷರು ಅನಗತ್ಯವಾಗಿ ಬೇರೆಡೆ ಹೋಗಿಬರಲು ಪಾಸ್ ನೀಡಿದರೆ ಜಿಲ್ಲೆಗೂ ವೈರಸ್ ಹರಡುವ ಸಾಧ್ಯತೆ ಇರುತ್ತದೆ. ಇವರು ಮಾಡಿದ ಎಡವಟ್ಟಿನಿಂದ ಜಿಲ್ಲೆಗೆ ಕರೊನಾ ಸೋಂಕಿತರನ್ನು ಕರೆತಂದತಾಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಜಿಪಂ ಸಿಇಒ ರಮೇಶ ದೇಸಾಯಿ ಕೂಡಲೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪಾಸ್ ನೀಡಿದ ಗ್ರಾಪಂ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಬೇಡ ಎಂದರೂ ಕೊಟ್ಟಿದ್ದಾರಂತೆ!

ಪಾಸ್ ನೀಡಿದ ಕುರಿತು ಮಾಸೂರು ಗ್ರಾಪಂ ಪಿಡಿಒ ರಂಗಪ್ಪ ಅವರನ್ನು ಸಂರ್ಪಸಿ ವಿಚಾರಿಸಿದಾಗ, ‘ಪಾಸ್ ಕೋಡೊಕೆ ನಿಮಗೆ ಅಧಿಕಾರವಿಲ್ಲ ಎಂದು ಅಧ್ಯಕ್ಷರಿಗೆ ತಿಳಿ ಹೇಳಿದ್ದೇವೆ. ಆದರೆ, ಜನ ಒತ್ತಾಯಿಸಿದ್ದರಿಂದ ಎರಡ್ಮೂರು ಜನರಿಗೆ ಕೊಟ್ಟಿರಬಹುದು. ಈ ಬಗ್ಗೆ ಅವರಿಗೆ ಇನ್ನೊಂದು ಸಾರಿ ತಿಳಿ ಹೇಳಿ, ತಹಸೀಲ್ದಾರ್ ಅವರಿಂದ ಪಾಸ್ ಪಡೆಯುವಂತೆ ತಿಳಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಗ್ರಾಪಂ ಅಧ್ಯಕ್ಷರಿಗೆ ಸ್ವತಃ ಪಾಸ್ ನೀಡಲು ಅವಕಾಶವಿಲ್ಲ. ಮಾಸೂರು ಗ್ರಾಪಂ ಅಧ್ಯಕ್ಷರು ಪಾಸ್ ನೀಡಿದ ಕುರಿತು ಪರಿಶೀಲಿಸಿ ಒಂದು ಬಾರಿ ಎಚ್ಚರಿಸಲಾಗುವುದು. ತಪ್ಪು ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. | ರಮೇಶ ದೇಸಾಯಿ, ಜಿಪಂ ಸಿಇಒ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net