ಗ್ರಾಪಂ ಅಧಿಕಾರಿ ವಿರುದಟಛಿ ಕಠಿಣ ಕ್ರಮಕ್ಕೆ ಆಗ್ರಹ

ydg5
ಹುಣಸಗಿ ತಾಲೂಕಿನ ರಾಜನಕೋಳೂರ ಗ್ರಾಪಂ ಪಿಡಿಒ 20 ಲಕ್ಷಕ್ಕೂ ಅಧಿಕ ಅನುದಾನ ದುರುಪಯೋಗ ಪಡಿಸಿಕೊಂಡಿರುವ ಚೆಕ್‌ನನ್ನು ಅಧ್ಯಕ್ಷೆ ಮೋತಿಬಾಯಿ ರಾಠೋಡ್, ಉಪಾಧ್ಯಕ್ಷ ಪ್ರಭುಗೌಡ ಮಾಲಿಪಾಟೀಲ್ ಮತ್ತು ಸದಸ್ಯರು ಪ್ರದರ್ಶಿಸಿದರು.
Published on

ಹುಣಸಗಿ (ಗ್ರಾಮೀಣ): ತಾಲೂಕಿನ ರಾಜನಕೋಳೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಪಂನಲ್ಲಿ 20 ಲಕ್ಷಕ್ಕೂ ಹೆಚ್ಚು ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದು ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷೆ ಮೋತಿಬಾಯಿ ರಾಠೋಡ್, ಉಪಾಧ್ಯಕ್ಷ ಪ್ರಭುಗೌಡ ಮಾಲಿಪಾಟೀಲ್ ಹಾಗೂ ಸದಸ್ಯರು ಜಂಟಿಯಾಗಿ ಆಗ್ರಹಿಸಿದ್ದಾರೆ.

ಈ ಕುರಿತು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15ನೇ ಹಣಕಾಸು ಯೋಜನೆಯಡಿ ಮಂಜೂರಾದ ಅನುದಾನದಲ್ಲಿ ಅಧ್ಯಕ್ಷರ ಗಮನಕ್ಕೆ ಬಾರದಂತೆ ವಿವಿಧ ಕಾಮಗಾರಿ ಕೈಗೊಳ್ಳದೆ ಒಂದೇ ಏಜೆನ್ಸಿಗೆ ಮೂರು ಬಾರಿ ಮೂರು ಲಕ್ಷ ರೂವರೆಗೆ ಹಣ ಪಾವತಿಸಲಾಗಿದೆ ಎಂದು ದಾಖಲೆ ಸಮೇತ ಆರೋಪಿಸಿದರು.

ಗ್ರಾಮದ ಸಿಆರ್‌ಸಿ ಕಟ್ಟಡ, ರಾಜನಕೋಳೂರು ತಾಂಡಾದ ಅಂಗನವಾಡಿ ಕಟ್ಟಡ ಮತ್ತು ಪೆಂಟಿAಗ್ ಹೆಸರಿನಲ್ಲಿ ಒಂದೇ ದಿನ ಮೂರು ಬಾರಿ ಏಜೆನ್ಸಿಗೆ ಹಣ ಸಂದಾಯ ಮಾಡಲಾಗಿದೆ. ಇದಕ್ಕೆ ನನ್ನ ಡೊಂಗಲ್ 15 ದಿನಗಳವರೆಗೆ ತಮ್ಮಲ್ಲಿ ಇರಿಸಿಕೊಂಡು, ನನ್ನ ಗಮನಕ್ಕೆ ಬಾರದಂತೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಅಧ್ಯಕ್ಷೆ ಮೋತಿಬಾಯಿ ರಾಠೋಡ್ ಗಂಭೀರವಾಗಿ ಆರೋಪಿಸಿದರು.

ಹಲವು ಬಾರಿ ಚೆಕ್‌ಗಳ ಮೇಲೆ ಹಣ ಮಾತ್ರ ನಮೂದಿಸಿ ಯಾವುದೇ ಏಜೆನ್ಸಿಗಳ ಹೆಸರು ಬರೆಯದೆ ಅಧ್ಯಕ್ಷರ ಸಹಿಗಾಗಿ ನೀಡಿದ್ದನ್ನು ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಪ್ರಭುಗೌಡ ಮಾಲಿಪಾಟೀಲ್ ಹಾಗೂ ಸದಸ್ಯರು ಪ್ರದರ್ಶಿಸಿದರು. ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳ ಗಮನಕ್ಕೆ ಬಾರದೆ ಹಣ ದುರುಪಯೋಗ ಮಾಡುತ್ತಿರುವ ಪಿಡಿಒ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ಈಗಾಗಲೇ (ಆ.13ರಂದು) ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗೊಂದು ವೇಳೆ ಮತ್ತೆ ವಿಳಂಬ ನೀತಿ ಅನುಸರಿಸಿದ್ದಲ್ಲಿ ಪಂಚಾಯಿತಿ ಎಲ್ಲ ಜನಪ್ರತಿನಿಧಿಗಳು ಗ್ರಾಮಸ್ಥರೊಂದಿಗೆ ತಾಪಂ ಮತ್ತು ಜಿಪಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡಲಗುವುದು ಎಂದು ಎಚ್ಚರಿಕೆ ನೀಡಿದರು. ಸದಸ್ಯರಾದ ಅಮರೇಗೌಡ ಪೊಲೀಸ್ ಪಾಟೀಲ್, ಲೋಕುನಾಯಕ ಪವಾರ, ಬಸವರಾಜ, ಶಿವಲಿಂಗಪ್ಪ ದೊಡ್ಡಮನಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net