

ಆನೇಕಲ್: ಬನ್ನೇರುಘಟ್ಟ ಕಾಡಂಚಿನ ಕೃಷ್ಣದೊಡ್ಡಿ ಗ್ರಾಮದ ಸುತ್ತಮುತ್ತಲ ಸರ್ಕಾರಿ ಜಮೀನಿನಲ್ಲಿ ಜಿಗಣಿ ಕೈಗಾರಿಕಾ ಪ್ರದೇಶದ ಗ್ರಾನೈಟ್ ಕಾರ್ಖಾನೆಗಳು ಕಲ್ಲು ಕತ್ತರಿಸುವಾಗ ಮತ್ತು ಹೊಳಪು ಮಾಡುವಾಗ ಬರುವ ಗಸಿ (ಸ್ಲರಿ) ಸುರಿಯುವುದಕ್ಕೆ ತಡೆ ಹಾಕಬೇಕು ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಾಕೀತು ಮಾಡಿದರು.
ಕೃಷ್ಣದೊಡ್ಡಿ ಗ್ರಾಮಕ್ಕೆ ಭಾನುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು, ಮಾಲಿನ್ಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಕಾರ್ಖಾನೆಗಳ ರಾಸಾಯನಿಕದಿಂದ ಕೊಳವೆಬಾವಿಗಳಲ್ಲಿ ನೀರು ಕಲುಷಿತವಾಗುತ್ತಿದೆ. ಪ್ರಾಣಿಪಕ್ಷಗಳ ಜೀವಕ್ಕೆ ಮಾರಕವಾಗುತ್ತಿದ್ದು, ಅಂತರ್ಜಲ ವಿಷವಾಗುತ್ತಿದೆ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಅನುಸರಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಖುದ್ದು ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ ಎಚ್ಚರಿಕೆ ನೀಡಬೇಕು. ಇಂಥ ಕೃತ್ಯ ಎಸಗುವ ಕಾರ್ಖಾನೆಗಳಿಗೆ ಬೀಗ ಹಾಕಬೇಕು. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಲಿನ್ಯ ಮಂಡಳಿ ಸದಸ್ಯ ಕಾರ್ಯದರ್ಶಿ ಬಸವರಾಜು ಪಾಟೀಲ್ ಮಾತನಾಡಿ, ಗ್ರಾೃನೈಟ್ ರಾಸಾಯನಿಕ ಸುರಿಯಲು ಈಗಾಗಲೇ ಎಸ್ ಬಿಂಗೀಪುರದಲ್ಲಿ ಜಾಗ ಗುರುತು ಮಾಡಲಾಗಿದೆ. ಕೃಷ್ಣದೊಡ್ಡಿಯಲ್ಲಿ ಅಕ್ರಮವಾಗಿ ರಾಸಾಯನಿಕ ಸುರಿಯುತ್ತಿರುವುದು ಕಂಡುಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ರಾಸಾಯನಿಕ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಿ ವಾಹನಗಳು ಎಲ್ಲಿ ಹೋಗುತ್ತವೆ ಎನ್ನುವ ಬಗ್ಗೆ ನಿಗಾವಹಿಸಲಾಗುವುದು. ಪ್ರತಿವಾರ ಮಾಲಿನ್ಯ ಮಂಡಳಿ ಅಧಿಕಾರಿಗಳಿಂದ ಈ ಬಗ್ಗೆ ವರದಿ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ಸಚಿವರು ಎಲ್ಲ ಇಲಾಖೆ ಅಧಿಕಾರಿಗಳನ್ನು ಒಗ್ಗೂಡಿಸಿ ಸಮಿತಿ ರಚನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ವರದಿ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಮಹದೇವಯ್ಯ ಹೇಳಿದರು.
ಕಲ್ಲುಬಾಳು ಗ್ರಾಪಂ ಅಧ್ಯಕ್ಷ ಬಸವರಾಜು, ಬೆಂಗಳೂರು ದಕ್ಷಿಣ ತಾಲೂಕು ಬಿಜೆಪಿ ಅಧ್ಯಕ್ಷ ರಾಜಶೇಖರರೆಡ್ಡಿ, ಆನೇಕಲ್ ಮಂಡಲ ಅಧ್ಯಕ್ಷ ಎನ್. ಶಂಕರ್ ಇದ್ದರು.
ವಿಜಯವಾಣಿ ವರದಿ ಉಲ್ಲೇಖಿಸಿದ ಸಚಿವ: ಮುತ್ಯಾಲಮಡು ಕಾಡಂಚಿನಲ್ಲಿ ನವಿಲು ಬೇಟೆ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಸಚಿವ ಆನಂದ್‌ಸಿಂಗ್ ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ‘ನವಿಲು ಬೇಟೆ’ ವರದಿ ಉಲ್ಲೇಖಿಸಿ ಮಾತನಾಡಿದರು.