ಹನೂರು: ತಾಲೂಕಿನ ಬಂಡಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಮುಂಭಾಗವೇ ಇರುವ ಚರಂಡಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆರವುಗೊಳಿಸುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ.
ಗ್ರಾಮ ಪಂಚಾಯಿತಿ ಮುಂಭಾಗದ ಮುಖ್ಯ ರಸ್ತೆ ಬದಿಯಲ್ಲಿ ಹಲವು ಕುಟುಂಬಗಳು ವಾಸಿಸುತ್ತಿವೆ. ಆದರೆ ಚರಂಡಿಯಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯ ಸಂಗ್ರಹವಾಗಿದೆ. ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ನಿಂತಲ್ಲೇ ನಿಂತಿದ್ದು, ದುರ್ನಾತ ಬೀರುವುದರ ಜತೆಗೆ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಇದರಿಂದ ಸುತ್ತಮುತ್ತಲಿನ ವಾತಾವರಣ ಹದಗೆಟ್ಟಿದೆ. ಅನೈರ್ಮಲ್ಯ ಮನೆ ಮಾಡಿದೆ. ರೋಗ ರುಜಿನಗಳ ಭೀತಿ ಇಲ್ಲಿನ ಜನರಲ್ಲಿ ಆವರಿಸಿದ್ದು, ಮನೆಯಲ್ಲಿ ವಾಸಿಸಲು ತುಂಬ ತೊಂದರೆ ಅನುಭವಿಸುವಂತಾಗಿದೆ.
ಚರಂಡಿಯಲ್ಲಿನ ತ್ಯಾಜ್ಯವನ್ನು ತೆರೆವುಗೊಳಿಸುವಂತೆ ಕಳೆದ ಒಂದು ತಿಂಗಳಿನಿಂದಲೂ ಇಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸುತ್ತಾ ಬಂದಿದ್ದರೂ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹೂಳನ್ನು ತೆರವುಗೊಳಿಸುವುದರ ಮೂಲಕ ಸ್ವಚ್ಛತೆ ಕಾಪಾಡುವಂತೆ ನಿವಾಸಿ ವಿಶ್ವ ಒತ್ತಾಯಿಸಿದ್ದಾರೆ.