

ಗೋಣಿಕೊಪ್ಪಲು: ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ರಕ್ತದಾನ ಶಿಬಿರಗಳನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿರಂತರವಾಗಿ ಆಯೋಜಿಸಬೇಕು. ಇದರಿಂದ ಮತ್ತೊಬ್ಬರ ಜೀವವನ್ನು ಉಳಿಸಬಹುದಾಗಿದೆ. ಆ ನಿಟ್ಟಿನಲ್ಲಿ ರಕ್ತದಾನ ಶಿಬಿರಗಳು ಹೆಚ್ಚಾಗಿ ನಡೆಯಲಿ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.
ಪಾಲಿಬೆಟ್ಟ ಜಮಾಅತ್‌ನ ಸಭಾಂಗಣದಲ್ಲಿ ಬುಧವಾರ ಎಸ್‌ಎಸ್‌ಎಫ್ ಕೊಡಗು ಜಿಲ್ಲೆ, ಪಾಲಿಬೆಟ್ಟ ಯೂನಿಟ್ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 350ನೇ ಬ್ಲಡ್ ಸೈಬೋ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಾಡುವ ಬಗ್ಗೆ ಪ್ರತಿ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ಆರೋಗ್ಯವಂತರು ರಕ್ತದಾನವನ್ನು ಮಾಡಬಹುದಾಗಿದೆ.
ರಕ್ತದಾನದಿಂದ ಕಷ್ಟದಲ್ಲಿರುವ ರೋಗಿಗಳಿಗೆ ಸಹಾಯ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಎಸ್‌ಎಸ್‌ಎಫ್ ಸಂಘಟನೆ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಸಮಾಜಕ್ಕೆ ಮಾದರಿ ಎಂದರು.
ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ರಕ್ತದಾನ ಶಿಬಿರಗಳು ಇತ್ತೀಚೆಗೆ ಉತ್ತಮವಾಗಿ ಆಯೋಜನೆಗೊಳ್ಳುತ್ತಿದೆ. ಸಂಘ ಸಂಸ್ಥೆಗಳು ಕೂಡ ಜನರಲ್ಲಿ ಜಾಗೃತಿ ಮೂಡಿಸಿ ಉತ್ತೇಜನ ನೀಡಲಾಗುತ್ತಿದೆ. ಶಿಬಿರಗಳು ಹೆಚ್ಚಾಗಿ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಪಾಲಿಬೆಟ್ಟ ಜಮಾಅತ್‌ನ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಫ್ ಜಿಲ್ಲಾ ಉಪಾಧ್ಯಕ್ಷರಾದ ರಜಾಕ್ ಸಅದಿ, ಪಾಲಿಬೆಟ್ಟ ಖದೀಬರಾದ ಜುಬೈರ್ ಸಖಾಫಿ ಮಲಪ್ಪುರಂ, ಪಾಲಿಬೆಟ್ಟ ಜಮಾಅತ್‌ನ ಕಾರ್ಯದರ್ಶಿ ಮುನ್ನಾ ಸಮೀರ್, ಕೋಶಾಧಿಕಾರಿ ಟಿ.ಕೆ. ಮುಸ್ತಫ, ಎಸ್‌ಎಸ್‌ಎಫ್ ರಾಜ್ಯ ಸದಸ್ಯ ಸ್ವಬಾಹ್ ಸಖಾಫಿ, ಸಾಮಾಜಿಕ ಕಾರ್ಯಕರ್ತ ಶಮೀಮ್, ಪಾಲಿಬೆಟ್ಟ ಗ್ರಾ.ಪಂ.ಸದಸ್ಯ ಎಂ.ಬಿ.ನಾಸೀರ್, ಎಸ್‌ಎಸ್‌ಎಫ್ ಯೂನಿಟ್ ಅಧ್ಯಕ್ಷ ಮುಬಾರಕ್, ಕಾರ್ಯದರ್ಶಿ ಅನ್ಸಿರ್, ಕೊಡಗು ವೈದ್ಯಕೀಯ ತಂಡ ಸೇರಿದಂತೆ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.