ಗ್ರಾ.ಪಂ.ಗಳಲ್ಲಿ ಸಂಭ್ರಮದ ನಿರ್ಗಮನ

21CBP2
Published on

ಚಿಕ್ಕಬಳ್ಳಾಪುರ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಎರಡೂ ವರೆ ವರ್ಷಗಳ ಅಧಿಕಾರದಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಗ್ರಾ.ಪಂ.ಗಳಲ್ಲಿ ಕೊನೆ ಸಭೆ, ಭೋಜನಕೂಟ, ಸನ್ಮಾನ, ಅಭಿವೃದ್ಧಿಯ ಗುಣಗಾನ ಸೇರಿದಂತೆ ನಾನಾ ಚಟುವಟಿಕೆಯು ಬಿರುಸಿನಿಂದ ನಡೆಯುತ್ತಿದೆ.

ಈಗಾಗಲೇ ತೆರವಾದ ಸ್ಥಾನಗಳಿಗೆ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಇನ್ನೇನು ಹತ್ತಿರದಲ್ಲಿಯೇ ಆಯ್ಕೆಗೆ ಚುನಾವಣಾ ಪ್ರಕ್ರಿಯೆಗಳು ನಡೆಯಲಿವೆ. ಇದರ ನಡುವೆ ಅಧಿಕಾರ ಅಂತ್ಯದ ಹಿನ್ನೆಲೆಯಲ್ಲಿ ಕೊನೆಯ ಗ್ರಾ.ಪಂ.ಸಭೆ ಮತ್ತು ಸಂತೋಷ ಕೂಟಗಳ ಮೂಲಕ ಸದಸ್ಯರನ್ನು ತೃಪ್ತಿಪಡಿಸುತ್ತಿದ್ದು ಇದರಲ್ಲಿ ಮರು ಆಯ್ಕೆಯ ಬಯಕೆ, ನಾಯಕರ ಸಲಹೆಯಂತೆ ವಿದಾಯದ ಹೆಸರಿನಲ್ಲಿ ಸದಸ್ಯರ ಒಗ್ಗಟ್ಟನ್ನು ಕಾಪಾಡಿಕೊಂಡು ಗಾದಿಯನ್ನು ಮತ್ತೆ ಬಳಗದ ಹಿಡಿತದಲ್ಲಿಟ್ಟುಕೊಳ್ಳುವಿಕೆ ಸೇರಿದಂತೆ ವಿವಿಧ ತಂತ್ರಗಾರಿಕೆ ಅಡಗಿದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ 157 ಗ್ರಾ.ಪಂ.ಗಳಿವೆ. ಕಳೆದ 2020 ನೇ ಸಾಲಿನ ಡಿಸೆಂಬರ್‌ನಲ್ಲಿ 152 ಗ್ರಾ.ಪಂ.ಗಳಿಗೆ ಚುನಾವಣೆ ನಡೆದಿತ್ತು. 2390 ಮಂದಿ ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾಗಿದ್ದು ತೀವ್ರ ಪೈಪೋಟಿಯ ನಡುವೆ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿಯನ್ನು ಹಿಡಿದಿದ್ದರು. ಇದೀಗ ಮೊದಲನೇ ಹಂತದ ಅಧಿಕಾರಾವಧಿ ಮುಗಿದಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯಾ ವ್ಯಾಪ್ತಿಯಲ್ಲಿ ಚುನಾಯಿತ ಗ್ರಾ.ಪಂ.ಸದಸ್ಯರನ್ನೊಳಗೊಂಡಂತೆ ಕೈಗೊಂಡಿದ್ದ ಸಭೆಗಳಲ್ಲಿ ಎರಡನೇ ಅವಧಿಗೆ ಹೊಸದಾಗಿ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.

* ಗ್ರಾ.ಪಂ.ಗಳಲ್ಲಿ ಸಂಭ್ರಮ

ಗ್ರಾ.ಪಂ.ಸದಸ್ಯರು ಯಾವುದೇ ರಾಜಕೀಯ ಪಕ್ಷದ ಚಿಹ್ನಯಡಿ ಆಯ್ಕೆಯಾಗುವುದಿಲ್ಲ. ಆದರೂ ಚುನಾವಣೆಗೆ ಬೆಂಬಲ, ಅಧಿಕಾರ ಸೇರಿದಂತೆ ನಾನಾ ಲೆಕ್ಕಾಚಾರದಲ್ಲಿ ಲಾಭದಾಯಕ ನಾಯಕರು ಇಲ್ಲವೇ ಪಕ್ಷದ ಕಡೆಗೆ ಗುರುತಿಸಿಕೊಂಡಿರಲಾಗುತ್ತದೆ. ಕಳೆದ ಎರಡೂ ವರೆ ವರ್ಷದಲ್ಲಿ ಸ್ಪಷ್ಟ ಬಹುಮತದ ಸದಸ್ಯರನ್ನು ಹಿಡಿತದಲ್ಲಿಟ್ಟುಕೊಂಡು ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಗಾದಿಯಿಂದ ಇಳಿಯುತ್ತಿದ್ದಾರೆ. ಮತ್ತೊಂದೆಡೆ ಹೊಸ ಆಕಾಂಕ್ಷಿಗಳು ಅಧಿಕಾರದ ಮೇಲೆ ಕಣ್ಣಿಟ್ಟಿದ್ದಾರೆ. ಇದರಿಂದ ಆಯಾ ಹಂತದಲ್ಲಿ ಗ್ರಾ.ಪಂ.ವಾರು ಬಿರುಸಿನಿಂದ ಸಭೆಗಳು ನಡೆಯುತ್ತಿವೆ. ಚುನಾವಣಾ ದೃಷ್ಟಿಯಿಂದ ರಾಜಕೀಯವಾಗಿ ಮತ್ತಷ್ಟು ಸಕ್ರಿಯವಾಗಿರುವ ಸದಸ್ಯರು ಈಗಲೇ ಗ್ರಾ.ಪಂ.ಗಳನ್ನು ಹಿಡಿದುಕೊಳ್ಳಲು ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಇದರ ಭಾಗವಾಗಿ ಸನ್ಮಾನ, ಭೋಜನ ಕೂಟವು, ಸಿಗುತ್ತಿರುವ ಲಾಭದಾಯಕ ಭರವಸೆಗಳು ಖುಷಿ ಮತ್ತು ಸಂಭ್ರಮಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net