

ಧಾರವಾಡ: ಜಿಲ್ಲೆಯಲ್ಲಿ ಕರೊನಾ ಹಾವಳಿ ಮತ್ತೆ ಮುಂದುವರಿದಿದೆ. ಭಾನುವಾರ ಸಂಜೆ ವೇಳೆಗೆ ಜಿಲ್ಲೆಯ 15 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಪೀಡಿತರ ಸಂಖ್ಯೆ 198ಕ್ಕೆ ಏರಿಕೆಯಾಗಿದೆ.
ನಗರದ ಸಂಗಮ ವೃತ್ತ ಬಳಿಯ ಕೆಂಪಗೇರಿ ಓಣಿಯ ನಿವಾಸಿ, ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆ ಪ್ಯಾಥಾಲಜಿ ವಿಭಾಗದ ವೈದ್ಯರೊಬ್ಬರಲ್ಲಿ ಶನಿವಾರ ಕೋವಿಡ್ ದೃಢಪಟ್ಟಿತ್ತು. ಅವರ ಸಂಪರ್ಕದಿಂದ 25ವರ್ಷದ ಯುವಕ ಹಾಗೂ 15 ವರ್ಷದ ಬಾಲಕನಿಗೆ ಸೋಂಕು ಹರಡಿದೆ. ಇವರಿಬ್ಬರೂ ವೈದ್ಯರ ಪುತ್ರರು.
ಹುಬ್ಬಳ್ಳಿ ತಾರಿಹಾಳ ರಾಮನಗರದ 8, 13 ವರ್ಷದ ಬಾಲಕಿಯರು, 12 ವರ್ಷದ ಬಾಲಕ ಮತ್ತು 34 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರು ಅದೇ ಪ್ರದೇಶದ 45 ವರ್ಷದ ಸೋಂಕಿತನ ಸಂಪರ್ಕಕ್ಕೆ ಬಂದಿದ್ದರು.
ಹುಬ್ಬಳ್ಳಿ ನೂರಾನಿ ಪ್ಲಾಟ್ನ 34 ವರ್ಷದ ಮಹಿಳೆ, 36 ವರ್ಷದ ಪುರುಷ ಸೋಂಕಿತರಾಗಿದ್ದಾರೆ. ಇವರಿಬ್ಬರೂ ಅದೇ ಪ್ರದೇಶದ 57 ವರ್ಷದ ವ್ಯಕ್ತಿಯ ಸೋಂಕಿತನ ಸಂಪರ್ಕದಿಂದ ರೋಗ ಬಂದಿದೆ. ಹುಬ್ಬಳ್ಳಿ ಕೃಷಿ ಕಾರ್ವಿುಕ ನಗರದ 20 ವರ್ಷದ ಯುವತಿಗೆ ಅದೇ ಪ್ರದೇಶದ 40 ವರ್ಷದ ವ್ಯಕ್ತಿಯ ಸಂಪರ್ಕದಿಂದ ಸೋಂಕು ತಗುಲಿದೆ.
ನವಲಗುಂದ ತಾಲೂಕಿನ ಮೊರಬ ಗ್ರಾಮದ 55 ವರ್ಷದ ಮಹಿಳೆಯ ಸಂಪರ್ಕದಿಂದ 34 ವರ್ಷದ ಪುರುಷ ಮತ್ತು ಕೊಂಡಿಕೊಪ್ಪ ಗ್ರಾಮದ 20 ವರ್ಷದ ಯುವಕನ ಸಂಪರ್ಕದಿಂದ 42 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ನಿಷೇಧಿತ ಪ್ರದೇಶದ 18 ವರ್ಷದ ಯುವಕನಿಗೂ ಭಾನುವಾರ ಕರೊನಾ ತಗುಲಿದೆ. ಮಹಾರಾಷ್ಟ್ರದಿಂದ ಮರಳಿರುವ 27 ಹಾಗೂ 30 ವರ್ಷದ ಮಹಿಳೆಯರು ಹಾಗೂ ಬಹ್ರೇನ್ನಿಂದ ಮರಳಿರುವ 37 ವರ್ಷದ ಪುರುಷ ಕರೊನಾ ಪೀಡಿತರಾಗಿದ್ದಾರೆ.
12 ಜನ ಬಿಡುಗಡೆ: ಕರೊನಾ ಪೀಡಿತರಾಗಿ ಹುಬ್ಬಳ್ಳಿ ಕಿಮ್್ಸ ನಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಜಿಲ್ಲೆಯ 12 ಜನ ಚೇತರಿಸಿಕೊಂಡಿದ್ದು, ಶನಿವಾರ ರಾತ್ರಿ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯ 198 ಪೀಡಿತರ ಪೈಕಿ ಈವರೆಗೆ 75 ಜನ ಬಿಡುಗಡೆಯಾಗಿದ್ದಾರೆ. 120 ಸಕ್ರಿಯ ಪ್ರಕರಣಗಳಿವೆ. ಮೂವರು ಕೋವಿಡ್ನಿಂದ ಮೃತಪಟ್ಟಿದ್ದಾರೆ.
313 ಶಂಕಿತರು ಪತ್ತೆ: ಜಿಲ್ಲೆಯಲ್ಲಿ ಶನಿವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 313 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಶನಿವಾರ ಇದ್ದ 23,252 ನಿಗಾವಹಿಸಿದವರ ಸಂಖ್ಯೆ ಭಾನುವಾರ 23,577ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 22,408 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 21,985 ಜನರ ವರದಿ ನೆಗೆಟಿವ್ ಬಂದಿವೆ. 198 ಪ್ರಕರಣಗಳು ಪಾಸಿಟಿವ್ ಬಂದಿದ್ದು, 121 ಜನರಿಗೆ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 74 ಜನರು ಚೇತರಿಕೆಯಾಗಿ ಬಿಡುಗಡೆಯಾಗಿದ್ದರೆ, ಮೂವರು ಮೃತಪಟ್ಟಿದ್ದಾರೆ.