

ಮೈಸೂರು: ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ನ್ಯೂರೋಜೋನ್‌ನಿಂದ ನಗರದ ಕೇಂದ್ರ ಗ್ರಂಥಾಲಯದಲ್ಲಿ ಆರೋಗ್ಯ ತಪಾಸಣೆಯ ಉಚಿತ ಶಿಬಿರ ಆಯೋಜಿಸಲಾಗಿತ್ತು.
ನಗರದ ಕೇಂದ್ರ ಗ್ರಂಥಾಲಯದಲ್ಲಿ ಸಿಬ್ಬಂದಿ, ಅವರ ಕುಟುಂಬದವರು ಹಾಗೂ ಸಾರ್ವಜನಿಕರಿಗೆ ಗುರುವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ 280 ಜನರು ತಪಾಸಣೆ ಮಾಡಿಸಿಕೊಂಡರು.
ಆಸ್ಪತ್ರೆಯ ನ್ಯೂರೋಜೋನ್‌ನ ಆಡಳಿತಾಧಿಕಾರಿ ಧನ್ಯಾಸುಶ್ರುತ ಅವರು ಮಾತನಾಡಿ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ವಿ. ಸುಶ್ರುತ್ ಅವರ ಮಾರ್ಗದರ್ಶನದಂತೆ ಥಾರ್ ಯೋಜನೆಯಡಿ ಇದುವರೆಗೆ ಮೈಸೂರು ಮತ್ತು ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 14 ಶಿಬಿರಗಳನ್ನು ನಡೆಸಿ 3780 ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ಸಲಹೆ, ಔಷಧ ನೀಡಲಾಗಿದೆ ಎಂದು ಹೇಳಿದರು.
ಉಚಿತ ಸಮಾಲೋಚನಾ ತಂಡದಲ್ಲಿ ನುರಿತ ವೈದ್ಯರು, ಶಸ್ತ್ರ ಚಿಕಿತ್ಸಕರು, ಹೃದ್ರೋಗ ತಜ್ಞರು, ಸ್ತ್ರೀರೋಗ ತಜ್ಞರು, ಮೂತ್ರಪಿಂಡ ತಜ್ಞರು, ನೇತ್ರ ತಜ್ಞರು, ಮನೋವೈದ್ಯರು, ನರರೋಗ ತಜ್ಞರು, ಮಕ್ಕಳ ತಜ್ಞ ಸೇರಿದಂತೆ ಎಲ್ಲ ವೈದ್ಯರು ಇರಲಿದ್ದಾರೆ. ಶಿಬಿರದಲ್ಲಿ ಸಮಸ್ಯೆ ಕಂಡು ಬಂದ ಜನರಿಗೆ ಫೋನ್‌ನ ಮೂಲಕ ಉಚಿತ ಸಲಹೆ ಮತ್ತು ಚಿಕಿತ್ಸೆಯನ್ನು ಮುಂದುವರಿಸಲಾಗುವುದು. ಇದರಿಂದ ನಿರಂತರವಾಗಿ ಸಂಪರ್ಕ ಸಾಧಿಸಲು ಈ ಶಿಬಿರ ಯಶಸ್ವಿಯಾಗಿದೆ ಎಂದು ಹೇಳಿದರು.
ನಗರ ಗ್ರಂಥಾಲಯದ ಉಪ ನಿರ್ದೇಶಕ ಮಂಜುನಾಥ್ ಸೇರಿದಂತೆ ಇತರರು ಇದ್ದರು.