

ಬೇಲೂರು: ಮಕ್ಕಳನ್ನು ಓದಿನತ್ತ ಕರೆತರಲು ಗ್ರಂಥಾಲಯಗಳ ಪಾತ್ರ ಮಹತ್ತರವಾಗಿದ್ದು, ಗ್ರಾಮೀಣ ಪ್ರದೇಶದ ಗ್ರಂಥಾಲಯಗಳು ಮಕ್ಕಳಸ್ನೇಹಿಯಾಗಬೇಕಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಹೇಳಿದರು.
ತಾಲೂಕು ಪಂಚಾಯಿತಿಯ ವಿಕಾಸಸೌಧದ ಸಭಾಂಗಣದಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮಕ್ಕಳಸ್ನೇಹಿ ಗ್ರಾಮೀಣ ಗ್ರಂಥಾಲಯ ಕುರಿತು ಗುರುವಾರ ಆಯೋಜಿಸಿದ್ದ ಮೂರು ದಿನಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಇರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಕಂಪ್ಯೂಟರ್ ಜ್ಞಾನದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಗ್ರಂಥಾಲಯದ ಮೇಲ್ವಿಚಾರಕರು ಶಿಸ್ತು, ಸಮಯಪಾಲನೆ ಮಾಡಬೇಕು. ಮಕ್ಕಳನ್ನು ಆಕರ್ಷಿಸಲು ಅಗತ್ಯವಾಗಿ ಬೇಕಾದ ಪುಸ್ತಕ ಜೋಡಿಸಬೇಕು. ಪ್ರತಿನಿತ್ಯ ಮಕ್ಕಳ ನೋಂದಣಿ ಮಾಡಿ ಭಯಮುಕ್ತ ವಾತಾವರಣ ನಿರ್ಮಿಸುವ ಕೆಲಸ ಮಾಡಬೇಕೆಂದು ಗ್ರಂಥಪಾಲಕರಿಗೆ ಕರೆ ನೀಡಿದರು.
ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕ ನೌಕರರ ತಾಲೂಕು ಅಧ್ಯಕ್ಷ ಮಂಜೇಗೌಡ ಮಾತನಾಡಿ, ತಾಲೂಕಿನಲ್ಲಿ 37 ಗ್ರಾಮೀಣ ಗ್ರಂಥಾಲಯಗಳಿದ್ದು, ಅವುಗಳು ಗ್ರಾಮ ಪಂಚಾಯಿತಿಗೆ ಒಳಪಟ್ಟಿವೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಗ್ರಂಥಾಲಯಗಳು ಗ್ರಾಮ ಪಂಚಾಯಿತಿಯ ಸಹಕಾರದಿಂದ ಬಲವರ್ಧನೆಗೊಳ್ಳುತ್ತಿವೆ. ನಾವು ಸಹ ಪ್ರಾಮಾಣಿಕವಾಗಿ ಮಕ್ಕಳಸ್ನೇಹಿ ಗ್ರಂಥಾಲಯ ನಿರ್ಮಿಸಲು ಬದ್ಧವಾಗಿದ್ದೇವೆ ಎಂದರು.
ಗ್ರಂಥಪಾಲಕರ ತರಬೇತಿ ಸಂದರ್ಭ ವಿಶೇಷವಾಗಿ ಪುಸ್ತಕಗಳ ಪರಿಚಯ, ಗಟ್ಟಿ ಓದು ಅಭಿಯಾನ, ಸಣ್ಣಕಥೆಗಳ ಓದುವ ಹವ್ಯಾಸ, ಕ್ರೀಡೆಗಳನ್ನು ಅಯೋಜಿಸಿ ಮಕ್ಕಳನ್ನು ಓದಿನತ್ತ ಕರೆ ತರುವುದು, ಬಾಲ್ಯದಲ್ಲೇ ಮಕ್ಕಳಿಗೆ ಓದಿನತ್ತ ಅಭಿರುಚಿ ಮೂಡಿಸುವುದು, ಮೊಬೈಲ್ ಗೀಳಿನಿಂದ ಮಕ್ಕಳನ್ನು ಹೊರತಂದು ಕಂಪ್ಯೂಟರ್ ಶಿಕ್ಷಣದ ಬಗ್ಗೆ ಮಾಹಿತಿ ನೀಡುವುದು, ಪುಸ್ತಕ ವಿಮರ್ಶೆ, ಕಥೆ ಹೇಳುವುದು, ಸ್ಪರ್ಧಾತ್ಮಕ ಪರೀಕ್ಷೆಗನುಗುಣವಾಗಿ ಮಾರ್ಪಡಿಸಿ, ಗ್ರಾಮೀಣ ಗ್ರಂಥಾಲಯಗಳನ್ನು ಮಕ್ಕಳಸ್ನೇಹಿ ಗ್ರಂಥಾಲಯವನ್ನಾಗಿಸುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಗ್ರಾಮೀಣ ಗ್ರಂಥಾಲಯಗಳ ಮೇಲ್ವಿಚಾರಕ ನೌಕರರ ಸಂಘದ ಕಾರ್ಯದರ್ಶಿ ರಘು, ತಾಪಂ ಸಹಾಯಕ ನಿರ್ದೇಶಕ ಗುರುಪ್ರಸಾದ್, ಉದ್ಯೋಗ ಖಾತ್ರಿ ಯೋಜನಾಧಿಕಾರಿ ನಂದಕುಮಾರ್ ಸೇರಿದಂತೆ ತಾಲೂಕಿನ 37 ಗ್ರಾಮ ಪಂಚಾಯಿತಿಗಳ ಗ್ರಂಥಾಲಯದ ಮೇಲ್ವಿಚಾರಕರಿದ್ದರು.