ಗ್ರಂಥಪಾಲಕರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

2002Klb04
Published on

ಕಲಬುರಗಿ: ಗ್ರಂಥಪಾಲಕರ ಹುದ್ದೆ ಭರ್ತಿ ಮಾಡುವಂತೆ ಆಗ್ರಹಿಸಿ ಹೈದರಾಬಾದ್ ಕರ್ನಾಟಕ ಗ್ರಂಥಪಾಲಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಗ್ರಂಥಪಾಲಕರ ಹುದ್ದೆಗಳನ್ನೂ ಸೇರಿಸಬೇಕು. 2006ರಲ್ಲಿ ಸಹಾಯಕ ಪ್ರಾಧ್ಯಾಪಕರ ಜತೆಗೆ 93 ಗ್ರಂಥಪಾಲಕರ ಹುದ್ದೆ ಭರ್ತಿ ಮಾಡಲಾಗಿತ್ತು. ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 411 ಕಾಲೇಜುಗಳಿದ್ದು, 200 ಗ್ರಂಥಪಾಲಕರ ಹುದ್ದೆ ಖಾಲಿ ಇವೆ ಎಂದು ಸಂಘದ ಅಧ್ಯಕ್ಷ ಡಾ.ಸುರೇಶ ಜಂಗೆ ಹೇಳಿದರು.
ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಗ್ರಂಥಾಲಯಗಳು ಹೃದಯವಿದ್ದಂತೆ. ಪರಿಣಾಮಕಾರಿ ಬೋಧನೆ, ವಿದ್ಯಾರ್ಥಿಗಳ ಸಂಶೋಧನಾ ವ್ಯವಸ್ಥೆಗೆ ಗ್ರಂಥಾಲಯಗಳು ನೆರವಾಗುತ್ತವೆ. ಯುಜಿಸಿ ಮಾನದಂಡದಂತೆ ಪದವಿ ಕಾಲೇಜಿನ ಬೋಧಕರು, ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ಬೋಧಕರು ವಿವಿಧ ಪದನಾಮಗಳಿಂದ ಗುರುತಿಸಿದ್ದು, ಈ ಮೂರು ವರ್ಗದವರನ್ನು ಬೋಧಕ ಸಿಬ್ಬಂದಿ ಎಂದು ಸ್ಪಷ್ಟೀಕರಿಸಿ ನೇಮಕಾತಿಯಲ್ಲಿ ಸಮಾನ ವಿದ್ಯಾರ್ಹತೆ ಪರಿಗಣಿಸಲಾಗಿದೆ ಎಂದರು.
ಸಂಪನ್ಮೂಲ ಸೇವೆಗಳ ನಿರ್ವಹಣೆ, ಮಾಹಿತಿ ಸೇವೆಗಳ ಪ್ರಸರಣದಲ್ಲಿ ಗ್ರಂಥಪಾಲಕರು ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಜತೆಗೆ ಗ್ರಂಥಪಾಲಕರ ಹುದ್ದೆಗಳನ್ನೂ ಭರ್ತಿ ಮಾಡಬೇಕು ಎಂದು ಮನವಿ ಮಾಡಿದರು.
ಡಾ.ಸಂತೋಷ ಹರವಾಳ, ಡಾ.ಎಂ.ಸಿ.ವಡ್ಡನಕೇರಿ, ಡಾ.ಬಸವರಾಜ ಮಂಗಲಗಿ, ಡಾ.ಮೆಹತಾಬ್ ಡಾಕುಳಗಿ ಇತರಿದ್ದರು. ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net