ಗ್ರಂಥ ಬಿಡುಗಡೆ, `ಶರಣ ಚರಿತಾಮೃತ' ಪ್ರವಚನ 25ರಿಂದ

Untitled
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಶ್ರೀ ಮುರುಘಾಮಠದ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಅಂಗವಾಗಿ ಜು. 25ರಿಂದ ಆ. 24ರವರೆಗೆ ಪ್ರತಿದಿನ ಸಂಜೆ 7ರಿಂದ `ಶರಣ ಚರಿತಾಮೃತ' ಪ್ರವಚನ ಹಾಗೂ ಗ್ರಂಥ ಬಿಡುಗಡೆ ಮತ್ತು ವಿಶೇಷ ಉಪನ್ಯಾಸ, ವಚನ ಗಾಯನ, ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.

ಜು. 25ರಂದು ಸಂಜೆ 7ಕ್ಕೆ ಮುರುಘಾಮಠದ ಪೀಠಾಧ್ಯಕ್ಷ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಉದ್ಘಾಟನೆ ನೆರವೇರಲಿದೆ. ಯರನಾಳದ ಶ್ರೀ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಮಖಂಡಿ ಓಲೆಮಠದ ಶ್ರೀ ಆನಂದ ದೇವರು ಸಮ್ಮುಖ ವಹಿಸುವರು. ಶಾಸಕ ಸಿ.ಸಿ. ಪಾಟೀಲ ಉದ್ಘಾಟಿಸುವರು. ಮನಗುಂಡಿ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಪ್ರವಚನ ನೀಡುವರು. ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅತಿಥಿಯಾಗಿ ಪಾಲ್ಗೊಳ್ಳುವರು. ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಅವರನ್ನು ಸನ್ಮಾನಿಸಲಾಗುವುದು.

ಆ. 24ರಂದು ಬೆಳಗ್ಗೆ 10ಕ್ಕೆ ವಚನಾಧಾರಿತ ಶರಣ ಚರಿತಾಮೃತ ಸಾಹಿತ್ಯದ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಸಂಜೆ 6ಕ್ಕೆ ಪ್ರವಚನ ಸಮಾರೋಪ ಜರುಗಲಿದ್ದು, ಶ್ರೀ ಭೋವಿ ಗುರುಪೀಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಿರೇಮಾಗಡಿ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮಿಜಿ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು. ಸಚಿವ ಎಚ್.ಕೆ. ಪಾಟೀಲ `ಅನುಭವ ಮಂಟಪ ಐತಿಹಾಸಿಕತೆ ಹಾಗೂ ಚಿದ್ಘನಲಿಂಗ ಸ್ತೋತ್ರ' ಹಾಗೂ `ಶಿವಾನುಭವ' ಪದ್ಯಗಳ ಗ್ರಂಥಗಳನ್ನು ಲೋಕಾರ್ಪಣೆಗೊಳಿಸುವರು. ಡಾ. ವೀರಣ್ಣ ರಾಜೂರ ಸಂಪಾದಕ ನುಡಿ ಸಲ್ಲಿಸುವರು. ಗ್ರಂಥ ದಾಸೋಹಿ ಎಸ್.ಬಿ. ಕೋರಿ ಅವರಿಗೆ ಸನ್ಮಾನಿಸಲಾಗುವುದು. ಶಾಸಕ ಅರವಿಂದ ಬೆಲ್ಲದ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net