

ಮಹಾನಗರ ಪಾಲಿಕೆಯಲ್ಲಿ ಇ-ಆಫೀಸ್ ಗೆ ಚಾಲನೆ
ಕಲಬುರಗಿ : ಎಪ್ಪತ್ತೇಳನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ ಧರ್ಗಿ ಅವರು ಮಂಗಳವಾರ ಪಾಲಿಕೆ ಕಚೇರಿಯಲ್ಲಿ 19 ಜನ ಮಹಿಳಾ ಫಲಾನುಭವಿಗಳಿಗೆ ಗ್ಯಾಸ್ ಸ್ಟೋ, ಕಾಲೇಜು ಮತ್ತು ವಸತಿ ನಿಲಯಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ವಿತರಿಸಿದರು.
ಪಾಲಿಕೆಯ ಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 11 ಹಾಗೂ ಇತರ ಹಿಂದುಳಿದ ವರ್ಗಕ್ಕೆ ಸೇರಿದ 8 ಮಹಿಳಾ ಫಲಾನುಭವಿಗಳಿಗೆ ಗ್ಯಾಸ ಸ್ಟೋವ್ ವಿತರಿಸಿದರು. ಮಹಿಳಾ ಪೌರಕಾರ್ಮಿಕರಿಗೆ ಸೀರೆ ಮತ್ತು ರೇನಕೋರ್ಟ್ ಹಾಗೂ ಪುರುಷ ಪೌರಕಾರ್ಮಿಕರಿಗೆ ರೇನ್‍ಕೋರ್ಟ್ ವಿತರಿಸಲಾಯಿತು.
ಮಹಾನಗರ ಪಾಲಿಕೆಯ 2021-22ನೇ ಸಾಲಿಗಾಗಿ ಶೇ.24.10ರ ನಿಧಿಯಡಿ ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವೀಧರ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಯುನಿರ್ವಸಲ್ ಕೋಚಿಂಗ್ ಸೆಂಟರ್ ಮೂಲಕ ನೀಡಲಾಗುವ ಯುಪಿಎಸ್‍ಸಿ/ ಕೆಪಿಎಸ್‍ಸಿ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗೆ ಪೂರಕವಾಗಿ ಒಂದು ವರ್ಷದ ಅವಧಿಯ ತರಬೇತಿಗೆ ಆಯ್ಕೆಯಾದ 11 ಅಭ್ಯರ್ಥಿಗಳಿಗೆ ಆಯ್ಕೆ ಪತ್ರವನ್ನು ವಿತರಿಸಲಾಯಿತು. ಇದಕ್ಕಾಗಿ ಪಾಲಿಕೆ 22 ಲಕ್ಷ ರೂ. ಅನುದಾನ ವೆಚ್ಚ ಮಾಡುತ್ತಿದೆ ಎಂದು ವಿಶಾಲ ಧರ್ಗಿ ತಿಳಿಸಿದರು.
ಪಾಲಿಕೆಯ ಎಸ್.ಎಫ್.ಸಿ. ಶೇ.24.10 ನಿಧಿಯಡಿ ಖರೀದಿಸಿದ “ಭಾರತ ಸಂವಿಧಾನ:ಡಾ. ಬಿ.ಆರ್. ಅಂಬೇಡ್ಕರ”, “ಡಾ. ಬಿ.ಆರ್. ಅಂಬೇಡ್ಕರ ರವರ ಜೊತೆಗಿನ ಅನುಭವಗಳು” ಹಾಗೂ “ದಮನಿತ ಅಲೆಮಾರಿಗಳು ನಿಜಾಮರ ಆಳ್ವಿಕೆಯಲ್ಲಿ ಲಂಬಾಣಿಗರು” ಗ್ರಂಥಗಳನು ಸಾರ್ವಜನಿಕರ ಓದಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ, ಪದವಿ ಪೂರ್ವ ಕಾಲೇಜು, ಪದವಿ ಮಹಾವಿದ್ಯಾಲಯದ ಗ್ರಂಥಾಲಯಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ 29 ವಿದ್ಯಾರ್ಥಿ ವಸತಿ ನಿಲಯಗಳಿಗೆ ನೀಡಲಾಯಿತು.
ಉಪ ಮಹಾಪೌರರಾದ ಶಿವಾನಂದ ಪಿಸ್ತಿ, ಆಡಳಿತ ಪಕ್ಷದ ನಾಯಕ ಕೃಷ್ಣಪ್ಪ ನಾಯಕ, ವಿರೋಧ ಪಕ್ಷದ ನಾಯಕ ಅಜಮಲ್ ಗೋಲಾ, ಆಯುಕ್ತ ಭುವನೇಶ ದೇವಿದಾಸ್ ಪಾಟೀಲ, ಉಪ ಆಯುಕ್ತ ಪ್ರಕಾಶ ರಜಪೂತ, ಉಪ-ಆಯುಕ್ತರು (ಅಭಿವೃದ್ಧಿ) ಆರ್.ಪಿ ಜಾಧವ, ಉಪ-ಆಯುಕ್ತ (ಕಂದಾಯ) ಪ್ರಹ್ಲಾದ ಕುಲಕರ್ಣಿ, ಸ್ಥಾಯಿ ಸಮಿತಿ ಸದಸ್ಯರು, ಪಾಲಿಕೆಯ ವಿವಿಧ ವಾರ್ಡ್‍ಗಳ ಸದಸ್ಯರು, ವಲಯ ಆಯುಕ್ತರು, ಕಾರ್ಯಪಾಲಕ ಅಭಿಯಂತರರು ಹಾಗೂ ಪಾಲಿಕೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.