ಗ್ಯಾಸ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

02 NMG 01
Published on

ನಾಗಮಂಗಲ: ಅಡುಗೆ ಅನಿಲದ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿದ್ದು ಸಾವಿರದ ಗಡಿ ದಾಟಿದರೂ ಮತ್ತೆ 50 ರೂ. ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಕೆಪಿಸಿಸಿ ಸದಸ್ಯ ಕೊಣನೂರು ಹನುಮಂತು ಮಾತನಾಡಿ, ದೇಶದಲ್ಲಿ 60 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಎಂದೂ ಜನಸಾಮಾನ್ಯರ ಜೀವನದ ಜತೆ ಚೆಲ್ಲಾಟವಾಡಲಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಹಾಗೂ ಜನಪರ ಆಡಳಿತ ನೀಡಿತ್ತು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಕೇವಲ ಬಂಡವಾಳಶಾಹಿಗಳ ಪರವಾದ ನಿಲುವುಗಳು, ಕಾನೂನುಗಳನ್ನು ಮಾಡುವ ಮೂಲಕ ಸಾಮಾನ್ಯ ಜನರು ಹಾಗೂ ಮಧ್ಯಮವರ್ಗದವರ ಬದುಕನ್ನು ಅತಂತ್ರ ಸ್ಥಿತಿಗೆ ಕೊಂಡೊಯ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿರಸ್ತೆದಾರ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ. ರಾಜೇಶ್, ಮುಖಂಡರಾದ ಸುನೀಲ್ ಲಕ್ಷ್ಮೀಕಾಂತ್, ಎಚ್.ಟಿ.ಕೃಷ್ಣೇಗೌಡ, ಚೇತನ್‌ನೆಲ್ಲಿಗೆರೆ, ಪುರಸಭೆ ಸದಸ್ಯ ತಿಮ್ಮಪ್ಪ, ದಾಸೇಗೌಡ, ಪುಟ್ಟರಾಜು, ತುರುಬನಹಳ್ಳಿ ರಾಜೇಗೌಡ, ತಿಮ್ಮರಾಯಿಗೌಡ, ಗೀತಾ ದಾಸೇಗೌಡ ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net