

ಹಾಸನ: ಗ್ಯಾರಂಟಿ ಬಗ್ಗೆ ಯಾರೂ ಮಾತನಾಡಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಯಾರು ಏನು ಹೇಳಿದರು ಯಾವ ಗ್ಯಾರಂಟಿ ಯೋಜನೆಗಳನ್ನು ವಾಪಸ್ ಪಡೆಯಲ್ಲ. ಎಲ್ಲಾ ಗ್ಯಾರಂಟಿಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗ್ಯಾರಂಟಿ ವಿಚಾರದಲ್ಲಿ ಯಾವುದೇ ಅನುಮಾನ ಇಟ್ಟುಕೊಳ್ಳುವುದು ಬೇಡ. ಈಗ ಇರುವಂತೆ ಯೋಜನೆಗಳು ಯಥಾಸ್ಥಿತಿ ಮುಂದುವರೆಯಲಿವೆ. ಕೆ.ಸಿ.ವೇಣುಗೋಪಾಲ್, ಸುಜ್ರೇವಾಲ ಅವರು ಇಬ್ಬರು ಕೂಡ ಗ್ಯಾರಂಟಿ ವಿಷಯದಲ್ಲಿ ಗೊಂದಲ ಉಂಟು ಮಾಡಬಾರದು ಎಂದು ಹೇಳಿದ್ದಾರೆ ಎಂದ ಅವರು, ಸತೀಶ್ ಜಾರಕಿಹೊಳಿ, ಮಹದೇವಪ್ಪ, ಮುನಿಯಪ್ಪ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ಹೈಕಮಾಂಡ್ ಬಂದು ಎಲ್ಲಾ ಮಂತ್ರಿಗಳನ್ನು ಕರೆಸಿ ಸೂಚನೆ ಕೊಟ್ಟಿದೆ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಒಂದು ದಿನಕ್ಕೆ ವಾಪಸ್ ಬಂದಿದ್ದಾರೆ.
ದೆಹಲಿ ಮುನಿಯಪ್ಪ ಅವರ ತವರು, ಸ್ವಂತ ಊರು. ಮಂತ್ರಿಯಾದ ತಕ್ಷಣ ವೈಯಕ್ತಿಕ ಅಭಿಪ್ರಾಯ ಹೇಳಬಾರದು ಅಂತ ಏನಿಲ್ಲ. ಯಾರು ಏನೇ ಹೇಳಿದರೂ ಅದು ಅವರ ವೈಯಕ್ತಿಕ ಅಭಿಪ್ರಾಯ. ಮೂವರು ಡಿಸಿಎಂ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಅವರು ಏನು ತೀರ್ಮಾನ ತೆಗೆದುಕೊಳ್ತಾರೆ ನೋಡೋಣ ಎಂದರು.
ಸಿಎಂ ಸಿದ್ದರಾಮಯ್ಯ ಅವರ ಮೇಲೆ ಏನೆಲ್ಲಾ ಆರೋಪಗಳು ಬರುತ್ತಾ ಇದೆ. ಸಿದ್ದರಾಮಯ್ಯ ಅವರು ಪಕ್ಷದ ಪವರ್‌ಫುಲ್ ಲೀಡರ್. ಕಾಂಗ್ರೆಸ್ ವೀಕ್ ಮಾಡಿ ಸಿದ್ದರಾಮಯ್ಯ ಅವರನ್ನು ವೀಕ್ ಮಾಡಬೇಕು ಎನ್ನುವ ಹುನ್ನಾರ ವಿರೋಧ ಪಕ್ಷದವರದ್ದು. ಸೈಟ್ ತಗೊಂಡು ಹದಿನೈದು ವರ್ಷ ಆಗಿದೆ. ಅದೇ ನಿಯಮದಡಿ ಬೇರೆ ಪಕ್ಷದವರು ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹೆಸರಿಗೆ ಕಪ್ಪುಚುಕ್ಕೆ ತರಬೇಕು ಎನ್ನುವ ಉದ್ದೇಶ ಹೀಗೆ ಮಾಡುತ್ತಿದ್ದಾರೆ. ಅವರು ರಾಜಕೀಯವಾಗಿ ಏನು ಮಾಡಲು ಹೊರಟಿದ್ದಾರೆ, ನಾವು ಅದನ್ನು ರಾಜಕೀಯವಾಗಿ ಎದುರಿಸುತ್ತೇವೆ ಎಂದು ತಿರುಗೇಟು ನೀಡಿದರು.
ರಾಜಕೀಯವಾಗಿ ಆರೋಪ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ರಾಜಕೀಯದಲ್ಲಿ ಯಾರೂ ಸತ್ಯ ಹರಿಶ್ಚಂದ್ರನ ಮಕ್ಕಳಿಲ್ಲ. ಅದರಲ್ಲಿ ಗ್ರೇಡ್ ಇರುತ್ತದೆ. ಸುಮ್ಮನೆ ನಾನು ಸತ್ಯಹರಿಶ್ಚಂದ್ರ ಅಂತ ಹೇಳಿಕೊಂಡರೆ ಅದು ಆತ್ಮವಂಚನೆ ಮಾಡಿಕೊಂಡಂತೆ. ಚುನಾವಣೆ ಸಮಯದಲ್ಲಿ ಯಾರೋ ಬಂದು ಹಣ ಕೊಡುತ್ತಾರೆ ಅಂದಾಕ್ಷಣ ನಾವು ಹಾಗೆ ಸುಮ್ಮನೆ ತೆಗೆದುಕೊಳ್ಳಲು ಆಗಲ್ಲ. ಆದರೂ ನಮಗೆ ಚುನಾವಣೆ ಖರ್ಚಿಗೆ ಹಣ ಬೇಕು. ಸತ್ಯ ಹೇಳಿದರೆ ಸರಿಯಾಗಲ್ಲ. ಅದಕ್ಕೆ ಹೇಳೋದು ನಾವು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳು, ಸತ್ಯಹರಿಶ್ಚಂದ್ರ ನಮ್ಮ ಮನೆಯಲ್ಲಿಯೇ ಬಾಡಿಗೆ ಇದ್ದದ್ದು ಅಂತ ಹೇಳಿಕೊಳ್ಳುವ ಬಹಳ ಜನ ರಾಜಕಾರಣಿಗಳು ಇದ್ದಾರೆ. ಹಾಗೆ ಹೇಳುವುದನ್ನು ನಾವು ಬೇಡ ಅನ್ನಲು ಆಗುತ್ತಾ ಎಂದು ಮಾರ್ಮಿಕವಾಗಿ ಹೇಳಿದರು.
ಹೆಚ್ಚಿನ ಮಳೆಯಿಂದ ರಸ್ತೆಗಳು ಹಾಳಾಗಿದ್ದು, ಇನ್ನೂ ಕೂಡ ಮಳೆ ಆಗುವ ಸೂಚನೆ ಇದೆ. ಹಾಗಾಗಿ ಮಳೆ ಮುಗಿದ ಬಳಿಕ ಮತ್ತೆ ರಸ್ತೆಗಳನ್ನು ದುರಸ್ತಿ ಮಾಡಿಸಲಾಗುವುದು. ಈ ವರ್ಷ ಮಳೆಯಿಂದ ಆಗಿರುವ ಹಾನಿ ಬಗ್ಗೆ ವರದಿ ಪಡೆಯುತ್ತೇವೆ. ಯಾವುದೇ ರೈತರಿಗೆ ಅನ್ಯಾಯ ಆಗದ ರೀತಿಯಲ್ಲಿ ನಮ್ಮ ಸರ್ಕಾರ ಪರಿಹಾರ ನೀಡಲಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಪರಿಹಾರ ಮೊತ್ತ ಪರಿಷ್ಕರಣೆ ಆಗಬೇಕು ಎನ್ನುವ ಬೇಡಿಕೆ ಇದೆ. ಈ ಬಗ್ಗೆ ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರ ಕೂಡ ಬರೆದಿದೆ ಎಂದರು.
ಇದೆ ವೇಳೆ ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ. ಸ್ವರೂಪ್ ಇತರರು ಉಪಸ್ಥಿತರಿದ್ದರು.