

ಮೈಸೂರು: ರಾಜ್ಯದಲ್ಲಿ ಬರಗಾಲ ಇದ್ದರೂ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಸಿದ್ದರಾಮಯ್ಯ ‘ಆಧುನಿಕ ಚಾರ್ವಾಕ’ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು.
ಮಳೆ ಇಲ್ಲದೆ ಜನರು ಸಂಕಷ್ಟ ಕಾಲದಲ್ಲಿ ಇದ್ದಾರೆ. ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾದ ಸರ್ಕಾರ, ನೂರು ದಿನದ ಸಂಭ್ರಮದಲ್ಲಿ ತೇಲುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನಾಳೆಯ ಬಗ್ಗೆ ಚಿಂತೆ ಮಾಡಿದೆ ಇಂದು ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಚಾರ್ವಾಕ ನೀತಿಯಂತೆ ಸಿದ್ದರಾಮಯ್ಯ ನಾಡಿನ ಭವಿಷ್ಯದ ಅಭಿವೃದ್ಧಿ ಕುರಿತು ಚಿಂತಿಸದೆ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯವನ್ನು ಸಾಲದ ಸುಳಿಗೆ ತಳ್ಳುತ್ತಿರುವ ‘ಆಧುನಿಕ ಚಾರ್ವಾಕ’ ಎಂದು ಆರೋಪಿಸಿದರು.
ಗೃಹಲಕ್ಷ್ಮೀಗೆ ಹಣ ಹೊಂದಿಸಲು ಮದ್ಯದ ದರ ಏರಿಕೆ ಮಾಡಲಾಗಿದೆ. ಮೂಲಸೌಕರ್ಯಕ್ಕೆ ಒತ್ತು ಕೊಡುವ ಯಾವ ಯೋಜನೆಯನ್ನೂ ರೂಪಿಸಲಿಲ್ಲ. ಬೆಲೆ ಏರಿಕೆ ದುಪ್ಪಟ್ಟಾಗಿದೆ. ಸಂಬಳ, ನಿವೃತ್ತಿವೇತನ, ಗ್ಯಾರಂಟಿ ಯೋಜನೆಗೆ ಮಾಸಿಕ 14500 ಕೋಟಿ ರೂ. ಬೇಕು. ರಾಜ್ಯದ ಆದಾಯವೇ 12 ಸಾವಿರ ಕೋಟಿ ರೂ., ಉಳಿಕೆ ಹಣವನ್ನು ಸಾಲ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ವಿವರಿಸಿದರು.
ರಾಜ್ಯ ಸರ್ಕಾರದ ನೂರು ದಿನಗಳ ಆಡಳಿತದಲ್ಲಿ ನೂರಾರು ತಪ್ಪುಗಳನ್ನು ಮಾಡುವ ಮೂಲಕ ಹಳಿ ತಪ್ಪುತ್ತಿದೆ. ಈ ಆಡಳಿತವನ್ನು ಪುಸ್ತಕ ರೂಪದಲ್ಲಿ ನಾಡಿನ ಜನತೆ ಮುಂದಿಡಲಾಗಿದೆ ಎಂದು ಹೇಳಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನಕ್ಕೂ ಮುನ್ನವೇ ತಮಿಳುನಾಡಿಗೆ ನೀರು ಬಿಟ್ಟು ಡಿಎಂಕೆ ಹಿತ ಕಾಯಲಾಗಿದೆ. ಈ ಮೂಲಕ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮೆಚ್ಚಿಸಲು ರಾಜ್ಯದ ರೈತರನ್ನು ಬಲಿ ಕೊಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಭ್ರಮದ ಮನಸ್ಥಿತಿ ಬಗ್ಗೆ ಸಿದ್ದರಾಮಯ್ಯ ಅವರೇ ಹೇಳಬೇಕು ಎಂದರು.
ಶಕ್ತಿ ಯೋಜನೆ ಮುಖಾಂತರ ಬಸ್ ದರ ಏರಿಸಿ ಪುರುಷರಿಗೆ ಬರೆ ಹಾಕಿದೆ. ಗೃಹಜ್ಯೋತಿ ಯೋಜನೆಯಡಿ ದುಪ್ಪಟ್ಟು ಬಿಲ್ ಬಂದಿದೆ. ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಮಳೆಗಾಲದಲ್ಲಿಯೇ ವಿದ್ಯುತ್ ಕಡಿತ ಮಾಡಿದ ಕುಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಬಿಜೆಪಿ ಅವಧಿಯಲ್ಲಿ ಜಾರಿಗೊಳಿಸಿದ್ದ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಆರೋಪಿಸಿದರು.
ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿ, ಪಂಗಡದವರ ಹಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್ ಹೆಸರಿನಲ್ಲಿ ಅಭಿಪ್ರಾಯ ದಮನಿಸುವ ಸುಳ್ಳು ಪ್ರಕರಣ ದಾಖಲಿಸುತ್ತಿದೆ. ಬೆಲೆ ಏರಿಕೆಯನ್ನು ಸಂಭ್ರಮಿಸಲು ಮೈಸೂರಲ್ಲಿ ರಾಹುಲ್ ಗಾಂಧಿ ಕರೆಸಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರೈತರ ಆತಹತ್ಯೆ ದುಪ್ಪಟ್ಟಾಗಿದೆ. ಚಿತ್ರದುರ್ಗ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಜನರು ಮೃತಪಟ್ಟಿದ್ದಾರೆ. ತಮ್ಮ ವೈಫಲ್ಯಗಳನ್ನು ಮರೆಮಾಚಲು ಹಿಂದಿನ ವಿವಾದಗಳನ್ನು ಕೆದಕುತ್ತಿದ್ದಾರೆ ಎಂದು ದೂರಿದರು.