

ಅಥಣಿ ಗ್ರಾಮೀಣ : ಕೃಷ್ಣಾ ನದಿ ದಂಡೆಯ ಗ್ರಾಮಗಳ ಅಭಿವೃದ್ಧಿಗೆ ಕಂಕಣಬದ್ಧನಾಗಿದ್ದು, ಸಕಲ ಮೂಲಸೌಕರ್ಯ ಒದಗಿಸಲು ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಸವದಿ ಗ್ರಾಮದಿಂದ ಸವದಿದರ್ಗಾ ವರೆಗಿನ ೨ ಕೋಟಿ ರೂ. ರಸ್ತೆ ವೆಚ್ಚದಲ್ಲಿ ಡಾಂಬರೀಕರಣ, ಜನವಾಡ ಗ್ರಾಮದ ಬಳಿ ೨ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಸೇತುವೆ ಲೋಕಾರ್ಪಣೆ ಹಾಗೂ ಜನವಾಡದಿಂದ ೧.೫೦ ಕೋಟಿ ರೂ. ವೆಚ್ಚದಲ್ಲಿ ಎತ್ತರಿಸಲಾದ ಹಿಪ್ಪರಗಿ ಡ್ಯಾಮ್‌ನಿಂದ ಸವದಿ ದರ್ಗಾವರೆಗಿನ ಸಂಪರ್ಕ ರಸ್ತೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೃಷ್ಣಾ ಪ್ರವಾಹ ಸಂದರ್ಭದಲ್ಲಿ ಜನವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಜನವಾಡ ಗ್ರಾಮದ ಪುನರ್ವಸತಿ ಕೆಲಸ ಭರದಿಂದ ಸಾಗಿದ್ದು, ನೀರು ಹಾಗೂ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದ ಕೆಲಸಗಳು ಮುಗಿದ ತಕ್ಷಣ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಹಾಗೂ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಲು ಆದ್ಯತೆ ನೀಡಲಾಗುವುದು ಎಂದರು.
ಸರ್ಕಾರದಿಂದ ಕ್ಷೇತ್ರಕ್ಕೆ ೨೫೦೦ ಕೋಟಿ ರೂ. ಅನುದಾನ: ಪಂಚ ಗ್ಯಾರಂಟಿ ಯೋಜನೆಗಳ ಸಲುವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಕಾಂಗ್ರೆಸ್ ಸರ್ಕಾರ ಹಣ ನೀಡುತ್ತಿಲ್ಲ ಎಂದು ವಿರೋಧ ಪಕ್ಷದವರು ಆಡುವ ಮಾತುಗಳು ಸುಳ್ಳಾಗಿವೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮೇಲೆ ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಇಲ್ಲಿಯವರೆಗೆ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ೧೪೮೬ ಕೋಟಿ ರೂ., ರಸ್ತೆ ಸುಧಾರಣೆಗೆ ೬೫ ಕೋಟಿ ರೂ., ಕೃಷಿ ಮಹಾವಿದ್ಯಾಲಯಕ್ಕೆ ೪೫೦ ಕೋಟಿ ರೂ., ೨೦ ಕೋಟಿ ರೂ. ಜೋಡು ಕೆರೆ ನಿರ್ವಹಣೆ, ಹೆಚ್ಚುವರಿ ಪಶುವೈದ್ಯಕೀಯ ಕಾಲೇಜಿಗೆ ೮೦ ಕೋಟಿ ರೂ., ನಿರಂತರ ಶುದ್ಧ ಕುಡಿಯುವ ನೀರು ಯೋಜನೆಗೆ ೧೨೦ ಕೋಟಿ ರೂ. ಸೇರಿ ಒಟ್ಟು ೨೫೦೦ ಕೋಟಿ ರೂ. ಹಣ ಸರ್ಕಾರ ನೀಡಿದೆ ಎಂದು ತಿಳಿಸಿದರು.
ಮುಖಂಡರಾದ ಚಿದಾನಂದ ಜಾಮಗೌಡರ, ಹಣಮಂತ ಗೂಗವಾಡ, ಮಹಮ್ಮದ ಕಮಾಲನವರ, ನಬಿಸಾಬ್ ಪಾಟೀಲ, ಬಸಪ್ಪ ಜಾಮಗೌಡರ, ಬಸಪ್ಪ ಯಲಶೆಟ್ಟಿ, ಅನ್ವರ್ ಪಾಟೀಲ, ಕುಮಾರ ಗುರವ, ಶಂಕರ ನೇಮಗೌಡ, ಶ್ರೀಶೈಲ ದುಲಾರಿ, ಮಲ್ಲನಗೌಡ ಪಾಟೀಲ, ಮಲ್ಲಪ್ಪ ಅವಟಿ, ಸುನೀಲ ದುಲಾರಿ, ಲೋಕೋಪಯೋಗಿ ಎಇಇ ಜಯಾನಂದ ಹಿರೇಮಠ, ಪ್ರವೀಣ ಹುಣಸಿಕಟ್ಟಿ, ಅರ್ಜುನ ನಾಯಿಕ ಇತರರಿದ್ದರು.