ಗ್ಯಾರಂಟಿಗಳಿಗೆ ದಲಿತರ ಹಣ ಬಳಕೆ:ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

ಗ್ಯಾರಂಟಿಗಳಿಗೆ ದಲಿತರ ಹಣ ಬಳಕೆ:ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ
Published on

ಹಾಸನ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟ ಹಣದಲ್ಲಿ 11 ಸಾವಿರ ಕೋಟಿ ಹಣವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗೆ ಉಪಯೋಗಿಸಿರುವುದು ದಲಿತರಿಗೆ ಮಾಡಿದ ಮಹಾ ಮೋಸವಾಗಿದೆ. ಇದು ನುಡಿದಂತೆ ನಡೆದ ಸರಕಾರವಲ್ಲ ಎಂದು ಕಾಂಗ್ರೆಸ್ ವಿರುದ್ಧ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಆರೋಪ ಮಾಡಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ಎಸ್‌ಸಿ ಎಸ್‌ಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಬಗ್ಗೆ ಜನಾಂದೋಲನದ ಅಂಗವಾಗಿ ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯಿಂದ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಪ್ರವೃತ್ತಿ ಕಾಂಗ್ರೆಸ್ ಸರಕಾರದ್ದಾಗಿದೆ. ಒಂದು ವರ್ಷಕ್ಕೆ 30 ಸಾವಿರ ಕೋಟಿ ಹಣವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ನಾವು ಮೀಸಲಿಡುತ್ತೇವೆ ಎಂದು ಸರಕಾರವು ಹಿಂದಿನಿಂದಲೂ ಹೇಳುತ್ತಲೇ ಬಂದಿದೆ. ಹೀಗೆ ನೋಡಿದರೆ ಕಳೆದ 10 ವರ್ಷದಲ್ಲಿ 3 ಲಕ್ಷ ಕೋಟಿ ಹಣವಾಗುತ್ತದೆ. ಇಷ್ಟು ಹಣ ಸರಿಯಾಗಿ ತಲುಪಿಸಿದರೆ ನಮ್ಮ ಜನಾಂಗದಲ್ಲಿ ಬಡತನವೇ ಇರುತ್ತಿರಲಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಜನರಿಗೆ ಐದು ಗ್ಯಾರಂಟಿಗಳ ಆಸೆಯನ್ನು ತೋರಿಸಿತು. ಈಗಾಗಲೇ ನಾಲ್ಕು ಗ್ಯಾರಂಟಿಯನ್ನು ಕೊಡಲಾಗಿದೆ. ಎಲ್ಲರಿಗೂ ಗ್ಯಾರಂಟಿ ಕೊಡುವಾಗ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಇಲ್ಲವೇ ಅಲ್ಪಸಂಖ್ಯಾತರಿಗೆ ಎನ್ನುವ ಪ್ರಶ್ನೆ ಬರುವುದಿಲ್ಲ. ಆದರೆ ಪರಿಶಿಷ್ಟ ಜಾತಿ ಮತ್ತು ವರ್ಗಕೆ ಮೀಸಲಿಟ್ಟ 34 ಸಾವಿರ ಕೋಟಿ ಹಣದಲ್ಲಿ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದು ದಲಿತ ಸಮುದಾಯಕ್ಕೆ ಮಾಡಿದ ಮೋಸ. ಈ ಬಗ್ಗೆ ರಾಜ್ಯಾದ್ಯಂತ ಪ್ರಶ್ನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಎಂದರೇ ಹೇಳುವುದು ಒಂದು ಮಾಡುವುದು ಮತ್ತೊಂದು. ಇದು ನುಡಿದಂತೆ ನಡೆಯುವ ಸರಕಾರವಲ್ಲ. ಹನ್ನೊಂದು ಸಾವಿರ ಕೋಟಿ ನುಂಗಿದರೂ ಕೂಡ ಯಾರೊಬ್ಬರು ಪ್ರಶ್ನೆ ಮಾಡುತ್ತಿಲ್ಲ. ನಾನೊಬ್ಬ ಅನ್ಯಾಯ ಆಗಿದೆ ಎಂದರೇ ಸಾಲದು. ನಮ್ಮ ಜನರು ದಡ್ಡರಿಲ್ಲ, ಬುದ್ದಿವಂತರಿದ್ದಾರೆ. ಸದನದಲ್ಲಿ ನಾನು ಕೂಡ ಕೇಳಿದ್ದೇನೆ. ಮಹದೇವಪ್ಪ ಅವರಿಗೂ ಕೇಳಿದೆ. ಈ ಹಣ ದುರುಪಯೋಗ ಆಗುವುದಕ್ಕೆ ಬಿಡುವುದಿಲ್ಲ. ದಲಿತರಿಗೆ ಬಿಟ್ಟು ಬೇರೆ ಯಾವುದಕ್ಕೂ ಬಳಕೆ ಮಾಡುವುದಿಲ್ಲ ಎನ್ನುತ್ತಾರೆ ಹೊರತು ಇದನ್ನು ಗ್ಯಾರಂಟಿಗೆ ಬಳಸಿರುವ ಬಗ್ಗೆ ಮಾತನಾಡುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ನಾವು 34 ಸಾವಿರ ಕೋಟಿ ದಲಿತರಿಗೆ ಇಟ್ಟಿದ್ದೇವೆ ಎಂದು ಸಿಎಂ ಹೇಳುತ್ತಾರೆ. ನಮಗೆ ಈ ರೀತಿ ಮೋಸ ವಂಚನೆ ಮಾಡುತ್ತಿದ್ದಾರೆ. ಕೇಂದ್ರ ಕೊಡುತ್ತಿರುವ ಅಕ್ಕಿ ಮಾತ್ರ ಬರುತ್ತಿದೆ. ಆದರೆ ರಾಜ್ಯದಿಂದ ಯಾವ ಅಕ್ಕಿ ಬರುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರವಿದೆ. ಮೊದಲು ನಮ್ಮವರಿಗೆ ಸೂಕ್ತವಾದ ಶಿಕ್ಷಣ ಕೊಡಬೇಕು. ನಮ್ಮ ಸಮುದಾಯವನ್ನು ಮೊದಲು ಒಗ್ಗೂಡಿಸುವ ಅವಶ್ಯಕತೆ ಇದೆ. ಹಿಂದೆ ಬ್ರಿಟಿಷರು ಇನ್ನೂರು ವರ್ಷಗಳ ಕಾಲ ಹೊಡೆದಾಡಿಸುವ ಕೆಲಸ ಮಾಡಿ ಆಳಿದರು. ಈ ಗುಣ ಈಗಲೂ ಮುಂದುವರೆದಿದೆ. ಯಾವ ಆಡಳಿತ ಪಕ್ಷ ಆಗಿರಲಿ ತಪ್ಪು ಮಾಡಿದರೇ ಅದು ತಪ್ಪೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆ ಸಂಯೋಜಕ ಎಚ್.ಸಿ. ಸ್ಟೀವನ್ ಪ್ರಕಾಶ್, ವಕೀಲರಾದ ಯೋಗೀಶ್, ಮಾಜಿ ಸಚಿವ ಎನ್. ಮಹೇಶ್, ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್, ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷರು ಎಸ್.ಡಿ. ಚಂದ್ರು, ಹಿರಿಯ ದಲಿತ ಮುಖಂಡರು ಪರ್ವತಯ್ಯ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net