ಗ್ಯಾರಂಟಿಗಳ ಬಗ್ಗೆ ಚರ್ಚೆ ನಡೆದಿಲ್ಲ

Published on

ಬಳ್ಳಾರಿ : ಸರ್ಕಾರದ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ನಗರದ ವಿಮ್ಸ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಯಾರಾದರೂ ಅಭಿಪ್ರಾಯ ಹೇಳಲು ಹಕ್ಕಿದೆ. ಕೆಲ ಸಂಪುಟ ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ರಾಜ್ಯದ ಬಜೆಟ್ ನಲ್ಲಿ ಅನುದಾನ ಕಡಿತ ಮಾಡಿ ಗ್ಯಾರಂಟಿ ಯೋಜನೆಗಳಿಗೆ ನೀಡಿಲ್ಲ. ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಬೇಕು. ಆದರೆ, ಕೇಂದ್ರದಿಂದ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕುಟುಂಬವರ ಹೆಸರಿನಲ್ಲಿ 97ಎಕರೆ ಜಮೀನು ಒತ್ತುವರಿಯಾಗಿರುವ ಬಗ್ಗೆ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರು ಆರೋಪಿಸಿ ಹೈಕೋರ್ಟ ನಲ್ಲಿ ದಾವೆ ಹೂಡಿದ್ದಾರೆ. ಹೈಕೋರ್ಟ ಗೆ ಸರ್ಕಾರದಿಂದ ಅಗತ್ಯ ದಾಖಲೆಯನ್ನು ಒದಗಿಸಲಾಗುವುದು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣವಾಗಿರುವುದು ನಿಜ. ಹಣ ಸೋರಿಕೆಯಾಗಿರುವುದು 84.5ಕೋಟಿಯಲ್ಲಿ ಈಗಾಗಲೇ 45 ಕೋಟಿ ರಿಕವರಿಯಾಗಿದೆ. ಈ ತಪ್ಪು ಮಾಡಿದವರ ಮೇಲೆ ಕ್ರಮಕೈಗೊಳ್ಳಲಾಗುತ್ತದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮುಡಾದಲ್ಲಿ ತನಿಖೆಯಿಲ್ಲದೆ ಬೊಬ್ಬೆ ಹೊಡೆಯುವುದು ಸರಿಯಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net