

ಸೇಡಂ: ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಿ ಬಂದಿರುವ ಕಾಂಗ್ರೆಸ್ ಸರ್ಕಾರ ಇದೀಗ, ಜನ ಹಾಗೂ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಂಸದ ಡಾ.ಉಮೇಶ ಜಾಧವ್ ದೂರಿದರು.
ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ ನೀಡಿದ್ದ ಹತ್ತಾರು ಭರವಸೆಗಳಲ್ಲಿ ಕೇವಲ ಐದನ್ನು ಮಾತ್ರ ಜಾರಿಗೊಳಿಸುವಲ್ಲಿ ಗಿರಕಿ ಹೊಡೆಯುತ್ತಿದೆ. ಗ್ಯಾರಂಟಿ ಯೋಜನೆ ಎಲ್ಲರಿಗೂ ಸಿಗುತ್ತದೆ ಎಂದು ಹೇಳಿದ್ದರು, ಆದರೆ ಇದೀಗ ಸಾಕಷ್ಟು ಷರತ್ತುಗಳನ್ನು ಹಾಕುತ್ತಿದ್ದಾರೆ. ಇವರು ನುಡಿದಂತೆ ನಡದವರಲ್ಲ, ನುಡಿದು ಎಡವಿದವರು ಎಂದು ಲೇವಡಿ ಮಾಡಿದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಮಾತನಾಡಿ, ರಾಜಕೀಯ ಜೀವನದಲ್ಲಿ ಸೋಲು-ಗೆಲುವು ಸಾಮಾನ್ಯ, ನಾವು ಸೋತಿz್ದೆÃವೆ ಎಂದು ಯಾವತ್ತೂ ಕೈಕಟ್ಟಿ ಕೂರೋದಿಲ್ಲ. ನಮ್ಮ ಹೋರಾಟ, ಪಕ್ಷ ಸಂಘಟನೆ ನಿರಂತರವಾಗಿ ನಡೆಯಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳೊಂದಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಗ್ರಾಪಂ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನಸ್ವಾಮಿ ಬಿಬ್ಬಳ್ಳಿ, ರಾಜಶೇಖರ ಮುಗಳಿ, ಪ್ರಕಾಶ ರಂಗನೋರ, ನಾಗಮ್ಮ ಜಗದೇವಪ್ಪ, ನರಸಿಂಗಮ್ಮ ಮೊಗಲಪ್ಪ, ಲಕ್ಷ್ಮೀ ಶಾಮರಾವ, ಮಹಾದೇವಮ್ಮ ಮಾಣಿಕಪ್ಪ, ಪ್ರಮುಖರಾದ ನಾಗಪ್ಪ ಕೊಳ್ಳಿ, ವಿಜಯಕುಮಾರ ಆಡಕಿ, ಸಿದ್ದು ಬಾನರ್, ಆತೀಶ ಪವಾರ್, ವೀರಾರೆಡ್ಡಿ ಬಟಗೇರಾ, ಮಲ್ಲಿಕಾರ್ಜುನ ಪಾಟೀಲ್ ಭೂತಪುರ, ರವಿ ಪಾಟೀಲ್, ರವಿ ಭಂಟನಹಳ್ಳಿ ಇತರರಿದ್ದರು.