

ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಕಾಯ್ದೆ ಉಲ್ಲಂಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದ್ದ ಹಣವನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ದೂರಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಹಣವನ್ನು ಮೂಲ ಉದ್ದೇಶಕ್ಕೆ ಬಳಸಬೇಕೆಂದು ಇದೇ ಕಾಂಗ್ರೆಸ್ ಸರ್ಕಾರ ಕಾಯ್ದೆ ಮಾಡಿತ್ತು. 7ಡಿ ರದ್ದು ಮಾಡಿದರು. ಆದರೀಗ ಅವರೇ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ ಎಂದರು.
ಅಧಿಕಾರಕ್ಕೆ ಬಂದ ವರ್ಷವೇ ಎಸ್‌ಸಿ, ಎಸ್ಟಿಗೆ ಮೀಸಲಿಟ್ಟ ಹಣದಲ್ಲಿ 11,144 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿದ್ದಾರೆ. 2024 ರಲ್ಲಿ ಎಸ್‌ಸಿಪಿ, ಟಿಎಸ್‌ಪಿ ಸೇರಿ 14,282 ಸಾವಿರ ಕೋಟಿ ಹಣ ಉಪಯೋಗಿಸಿದ್ದಾರೆ. ಎಸ್‌ಸಿ/ಎಸ್ಟಿಗಳ ಸಬಲೀಕರಣಕ್ಕೆ ಈ ಅನುದಾನ ಬಳಸಬೇಕಿತ್ತು. ಆದರೆ ಈ ಸರ್ಕಾರ ಎರಡು ವರ್ಷಗಳಲ್ಲಿ ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಕೂಡಲೇ ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮುಂದೆಯೂ 14,500 ಕೋಟಿ ಹಣ ದುರ್ಬಳಕೆಗೆ ಸನ್ನದ್ಧರಾಗಿರುವ ಬಗ್ಗೆ ಮಾಹಿತಿ ಇದೆ. ಗ್ಯಾರಂಟಿಗೆ ಹಣ ಹೊಂದಿಸುವ ಯೋಗ್ಯತೆ ಇಲ್ಲದೆ ದಲಿತರ ಹಣ ದುರ್ಬಳಕೆ ಮಾಡುತ್ತಿರುವುದು ವಿಷಾದಕರ ಎಂದರು.
ಸಿಎಂ ಬದಲಾವಣೆ ಚರ್ಚೆ ಬಗ್ಗೆ ಕೇಳಿದ ಪ್ರಶ್ನೆಗೆ ಆಡಳಿತದಲ್ಲಿರುವುದು ಕಾಂಗ್ರೆಸ್, ಅವರನ್ನು ಕೇಳಬೇಕು. ಅವರ ಪಕ್ಷದ ಒಳಗೆ ಏನು ನಡೆಯುತ್ತಿದೆ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ವಿರೋಧ ಪಕ್ಷವಾಗಿ ಅದರಲ್ಲಿ ನಮ್ಮ ಕೆಲಸವಿಲ್ಲ. ಸಿಎಂ ಕುರ್ಚಿಗಾಗಿ ವಾದ-ಸಂವಾದ ನಡೆಸುತ್ತಿರುವುದು ಅವರು. ಯಾರು ಮುಖ್ಯಮಂತ್ರಿ ಆಗಬೇಕು ಅಂತ ಅವರೇ ತೀರ್ಮಾನ ಮಾಡಬೇಕು ಎಂದು ಉತ್ತರಿಸಿದರು.
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತು ಸಿಎಂ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಮರುವಿಂಗಡಣೆಯಿಂದ ಲೋಕಸಭಾ ಕ್ಷೇತ್ರಗಳು ಕಡಿಮೆ ಆಗಲ್ಲ ಅಂತ ಗೃಹ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.