ಗ್ಯಾರಂಟಿ ಯೋಜನೆಗಳಿಂದ ಅಧೋಗತಿಗೆ ರಾಜ್ಯ: ಎಂಎಲ್ಸಿ ಎಚ್. ವಿಶ್ವನಾಥ್ ವಾಗ್ದಾಳಿ

Vishwanath
Published on

ಮೈಸೂರು:ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಹಣಕಾಸಿನ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು, ಸಿಎಂ ಅವರು ಹಣಕಾಸಿನ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.

ರಾಜ್ಯ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಸಿದ್ದರಾಮಯ್ಯರ ಗ್ಯಾರಂಟಿ ಯೋಜನೆಗಳು ರಾಜ್ಯವನ್ನು ದುಸ್ಥಿತಿಗೆ ದೂಡಿವೆ. ಮುಖ್ಯಮಂತ್ರಿ ಕೇವಲ ಭಾಷಣ ಮಾಡುವುದಲ್ಲ. 16ನೇ ಬಜೆಟ್ ಮಂಡನೆ ಮಾಡುವುದು ದೊಡ್ಡ ವಿಚಾರವಲ್ಲ. ಅದರಿಂದ ಏನು ಪ್ರಯೋಜನ ಎಂಬುದನ್ನು ತಿಳಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಬಿಜೆಪಿ ನಾಯಕರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಆರ್ಥಿಕ ತಜ್ಞ ಮೋಹನ್‌ದಾಸ್ ಪೈ ಆತಂಕದ ಮಾತುಗಳನ್ನಾಡಿದ್ದಾರೆ. ಸಾರಿಗೆ ಇಲಾಖೆಯ 4 ನಿಗಮಗಳು 2 ಸಾವಿರ ಕೋಟಿ ರೂ. ಸಾಲ ಪಡೆಯಲು ರಾಜ್ಯ ಸರ್ಕಾರ ಸಮ್ಮತಿ ನೀಡಿದೆ. ಸಾಲ ಮರುಪಾವತಿಸಲು ಪರದಾಡುತ್ತಿರುವ ಕಾರಣ ಸಾಲ ಮಂಜೂರಾಗಲಿದೆಯೇ ಅಥವಾ ಇಲ್ಲವೇ ನೋಡಬೇಕು. ಶೇ.18ರಷ್ಟು ಬಡ್ಡಿ ಕಟ್ಟಬೇಕಿದೆ. ಇದು ಸಿದ್ದರಾಮಯ್ಯನವರ ಕೊಡುಗೆ ಎಂದು ದೂರಿದರು.

ಅಧಿಕಾರಿಗಳ ಮೇಲೆ ಸಿದ್ದರಾಮಯ್ಯರಿಗೆ ಹಿಡಿತ ಕೈತಪ್ಪಿದೆ. ರೋಹಿಣಿ ಸಿಂಧೂರಿ ಹಾಗೂ ರೂಪಾ ಬೀದಿ ಜಗಳ ಮಾಡಿಕೊಂಡಿದ್ದರೂ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಿಲ್ಲ. ಕೇಂದ್ರ ಸರ್ಕಾರದ ಸೇವೆಗೆ ವಾಪಸ್ ಕಳುಹಿಸದೆ ಇಟ್ಟುಕೊಳ್ಳಲಾಗಿದೆ. ಆಡಳಿತದಲ್ಲಿ ಬಿಗಿಯಾದ ಕ್ರಮಗಳು ಇಲ್ಲದಿರುವುದು ಇದಕ್ಕೆ ಕಾರಣ ಎಂದು ಆರೋಪಿಸಿದರು.

ನಗರ ಅಭಿವೃದ್ಧಿ ವಿಸ್ವಸ್ಥ ಮಂಡಳಿ-ಸಿಐಟಿಬಿ(ಈಗ ಮುಡಾ) ದಾಖಲೆ ಪ್ರಕಾರ ಪ್ರಿನ್ಸೆಸ್ ರಸ್ತೆ ಎನ್ನುವುದು ಇದೆ. ಭಟ್ಟಂಗಿಗಳು, ಚಮಚಗಳು, ಶಿಷ್ಯರಿಂದ ತಮ್ಮ ಹೆಸರನ್ನು ಹಾಳು ಮಾಡದಂತೆ ರಸ್ತೆ ವಿಚಾರದಲ್ಲಿ ಸುಮ್ಮನಿರುವಂತೆ ಸೂಚಿಸಬೇಕು ಎಂದು ಸಿಎಂಗೆ ಸಲಹೆ ನೀಡಿದರು.

ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಒಂದು ದಿನ ಅದರಲ್ಲಿ ಕೂರಲಿಲ್ಲ. ನೀವು ನಿಮ್ಮ ಹೆಸರನ್ನು ಇಟ್ಟುಕೊಂಡು ಏನು ಮಾಡ್ತೀರಾ? 21 ಲಕ್ಷ ಎಕರೆ ಭೂಮಿಯನ್ನು ಕೊಟ್ಟ ಡಿ.ದೇವರಾಜ ಅರಸು ಅವರಂತೆ ನಿಮ್ಮನ್ನು ಅನ್ನದರಾಮಯ್ಯ ಎನ್ನುತ್ತಾರೆ. ಭಟ್ಟಂಗಿಗಳಿಂದಾಗಿ 4 ದಶಕಗಳಿಂದ ಕಾಪಾಡಿಕೊಂಡು ಬಂದಿರುವ ಹೆಸರಿನ ಗೌರವ ಹಾಳು ಮಾಡಿಕೊಳ್ಳಬೇಡಿ ಎಂದು ಹರಿಹಾಯ್ದರು

ಮುಡಾದಲ್ಲಿ 50:50 ಹೆಸರಿನಲ್ಲಿ ಭೂಮಿ ನುಂಗಿದವರಿಂದ ನಿಮ್ಮ ಹೆಸರು ಕೆಡಲು ಕಾರಣವಾಗಿದೆ. ಈಗ ಮತ್ತೆ ಅಂತಹವರ ಮಾತು ಕೇಳಬೇಡಿ ಎಂದು ಶಾಸಕ ಕೆ.ಹರೀಶ್‌ಗೌಡ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

ರಾಜಕಾರಣಿಗಳಂತೆ ಅಧಿಕಾರಿಗಳು ಚಮಚಗಿರಿ ಮಾಡಿದರೆ ಕಷ್ಟ. ನಗರಪಾಲಿಕೆ ಆಯುಕ್ತರು ಹೇಳಿರುವ ಮಾತನ್ನು ನೋಡಿದರೆ ಚಮಚಗಿರಿ ಎನಿಸಿದೆ. 30 ವರ್ಷಗಳ ದಾಖಲೆ ನೋಡುವುದು ಅಲ್ಲ. ಸಿಐಟಿಬಿ ರಚನೆಯಾಗಿ ನೂರು ವರ್ಷಗಳು ಕಳೆದಿವೆ ಎನ್ನುವುದು ಗೊತ್ತಿಲ್ಲವೇ? ಮುಡಾದಲ್ಲಿ ಸದಸ್ಯರಾಗಿರುವ ನೀವು ದಾಖಲೆ ಪಡೆದುಕೊಳ್ಳಿ ಎಂದು ಗುಡುಗಿದರು.

ಕಾಂಗ್ರೆಸ್‌ನ ಕೆಲ ಮುಖಂಡರು, ವಕ್ತಾರರು ಯದುವೀರ್ ಬಗ್ಗೆ ಅಗೌರವವಾಗಿ ಮಾತನಾಡಿರುವುದು ಸರಿಯಲ್ಲ. ನಿಮಗೆ ಇತಿಹಾಸ ಗೊತ್ತಿಲ್ಲದಿದ್ದರೆ ಸುಮ್ಮನೆ ಇರಬೇಕೆ ಹೊರತು ಬಾಯಿಗೆ ಬಂದಂತೆ ಮಾತನಾಡಬಾರದು. ಯದುವಂಶದ ಬಗ್ಗೆ ಮಾತನಾಡಿ ಸಣ್ಣವರಾಗುವುದು ನೀವೇ ಎಂದು ವಾಗ್ದಾಳಿ ನಡೆಸಿದರು.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿಚಾರದಲ್ಲಿ ಸ್ಥಳ ಮಹಜರು ಮಾಡುತ್ತೇವೆಂದು ಪೊಲೀಸರು ಹೇಳುತ್ತಿರುವುದು ನಾಚಿಕೆಗೇಡು. ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ ಈ ಪ್ರಕರಣ ಮುಗಿದ ಅಧ್ಯಾಯ ಎಂದಿದ್ದಾರೆ. ಹೀಗಾಗಿ, ಪೊಲೀಸರು ಕುರ್ಚಿ, ಟೇಬಲ್ ನೋಡಿ ಮಹಜರು ಮಾಡುತ್ತಾರೆಯೇ? ಅಧಿವೇಶನದ ಘನತೆ, ಗೌರವ, ಪರಂಪರೆ ಹಾಳು ಮಾಡಲಾಗಿದೆ.

ವಿಧಾನಸೌಧದ ಒಳಗೆ ಮತ್ತು ಕಾರಿಡಾರ್‌ನಲ್ಲಿ ಪೊಲೀಸರು ಬರಬಾರದೆಂದು ಮಾರ್ಷಲ್‌ಗಳನ್ನು ನೇಮಕ ಮಾಡಲಾಗಿದೆ. ಹೀಗಿದ್ದರೂ, ಯಾವ ಮಹಜರು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ನಟ ಶಿವರಾಜಕುಮಾರ್ ಕ್ಯಾನ್ಸರ್‌ನಿಂದ ಮುಕ್ತಿ ಹೊಂದಿರುವುದು ಸಂತಸವಾಗಿದೆ. ನಾಡಿನ ಜನರ ಹಾರೈಕೆಯಿಂದ ಆರೋಗ್ಯವಾಗಿ ಹಿಂತಿರುಗಬೇಕು. ಮುಂದಿನ ದಿನಗಳಲ್ಲಿ ಎಂದಿನಂತೆ ಚಿತ್ರದಲ್ಲಿ ನಟಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net