

ಕೆ.ಆರ್.ನಗರ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಬಡ ಜನತೆಗೆ ಉಪಯುಕ್ತವಾಗಿದ್ದು, ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಪಟ್ಟಣದ ಆದಿಶಕ್ತಿ ಬಡಾವಣೆ, ಕನಕನಗರ ಬಡಾವಣೆ ಮತ್ತು ಕಂಠೇನಹಳ್ಳಿ ಬಡಾವಣೆಯಲ್ಲಿ ಶನಿವಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು. ಬಡವರ ಪರವಾಗಿ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಇದರಲ್ಲಿ ಹುಳುಕು ಹುಡುಕುವ ಕೆಲಸಕ್ಕೆ ಬಿಜೆಪಿ ಮತ್ತು ಜೆಡಿಎಸ್ ಕೈ ಹಾಕಬಾರದು ಎಂದರು.
ವಿದ್ಯುತ್ ಇಲಾಖೆಯಲ್ಲಿ ಶೇ.23ರಷ್ಟು ವಿದ್ಯುತ್ ಕಳ್ಳತನವಾಗುತ್ತಿದ್ದು, ಇದರ ಲಾಭವನ್ನು ಅಧಿಕಾರಿಗಳು ಪಡೆಯುತ್ತಿದ್ದಾರೆ. ಇಂತಹದನ್ನು ತಡೆದಾಗ ಜನತೆಗೆ ಸವಲತ್ತು ನೀಡಲು ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರು ಪರಿಶೀಲನೆ ಮಾಡಬೇಕು ಎಂದು ಸಲಹೆ ನೀಡಿದ ಎಚ್.ವಿಶ್ವನಾಥ್, ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ನೀಡಲಾದ ಗ್ಯಾರಂಟಿ ಜಾರಿಗೆ ತಂದಿರುವುವುದನ್ನು ಸ್ವಾಗತಿಸುವುದಾಗಿ ಹೇಳಿದರು.
ಉಚಿತವಾಗಿ ನೀಡುವ ಸೌಲಭ್ಯಕ್ಕೆ ಷರತ್ತು ವಿಧಿಸಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಐದು ಗ್ಯಾರಂಟಿಗಳಿಗೆ ಷರತ್ತು ವಿಧಿಸಬಾರದು ಎಂದು ಹೇಳುತ್ತಿರುವ ಎಚ್.ಡಿ.ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಶೋಭೆ ತರುವುದಿಲ್ಲ. ಈ ಇಬ್ಬರೂ ಮುಖ್ಯಮಂತ್ರಿಯಾಗಿದ್ದವರು. ಹೀಗಾಗಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಆಂಜನೇಯ ಬಡಾವಣೆಯ ಆಂಜನೇಯಸ್ವಾಮಿ ದೇವಾಲಯಕ್ಕೆ ಕಾಂಪೌಂಡ್ ನಿರ್ಮಾಣ, ಅಡುಗೆ ಮನೆ ಮತ್ತು ಕೊಠಡಿ ನಿರ್ಮಾಣಕ್ಕೆ ಸರ್ಕಾರದಿಂದ 25 ಲಕ್ಷ ರೂ. ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
ಈ ಮೂರು ಕಾಮಗಾರಿಗಳನ್ನು ದೇವಾಲಯದ ಜೀರ್ಣೋದ್ಧಾರ ಸಮಿತಿಯವರು ಗುಣಮಟ್ಟದಿಂದ ಮತ್ತು ವ್ಯವಸ್ಥಿತವಾಗಿ ಮಾಡಿಸಬೇಕು. ಹಣದ ಕೊರತೆ ಎದುರಾದರೆ ವೈಯಕ್ತಿಕವಾಗಿ ಆರ್ಥಿಕ ಸಹಕಾರ ಮಾಡುತ್ತೇನೆ ಎಂದರಲ್ಲದೆ, ಮಾರುತಿ ಯುವಕ ಸಂಘದವರು ಇದರ ಜವಾಬ್ದಾರಿಯನ್ನು ಹೊತ್ತು ಮುಂದಿನ ಹನುಮ ಜಯಂತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ತಮ್ಮ ಅನುದಾನದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿದ್ದಾರೆ. ಇನ್ನಷ್ಟು ಘಟಕಗಳನ್ನು ಆರಂಭಿಸಲು ಅನುದಾನ ನೀಡುವಂತೆ ಮನವಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪಟ್ಟಣದ ರೇಡಿಯೋ ಮೈದಾನ ಸೇರಿದಂತೆ ವಿವಿಧೆಡೆ ಘಟಕಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶಾಸಕ ಡಿ.ರವಿಶಂಕರ್ ಅವರನ್ನು ಬಡಾವಣೆ ನಿವಾಸಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸನ್ಮಾನಿಸಿದರು. ಪುರಸಭೆ ಸದಸ್ಯರಾದ ಕೆ.ಜಿ.ಸುಬ್ರಮಣ್ಯ, ನಟರಾಜು, ಶಿವಕುಮಾರ್, ಮಿಕ್ಸರ್ ಶಂಕರ್, ಮುಖ್ಯಾಧಿಕಾರಿ ಸುಧಾರಾಣಿ, ಮುಖಂಡರಾದ ಬಿ.ಎಂ.ನಾಗರಾಜು, ಗಂಗಾಧರ್, ಎಚ್.ಪಿ.ಗೋಪಾಲ್, ರಾಜಶೇಖರ್, ಮಂಜುನಾಥ್, ಶಾಂತರಾಜು ಹಾಜರಿದ್ದರು.