ಗ್ಯಾರಂಟಿ ಯೋಜನೆಗಳ ಸಮರ್ಪಕ ಮಾಹಿತಿ ಒದಗಿಸಿ

Published on

ಚಾಮರಾಜನಗರ : ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳು ಸ್ಪಷ್ಟ, ನಿಖರ ಹಾಗೂ ಸಮರ್ಪಕ ಮಾಹಿತಿ ಒದಗಿಸುವಂತೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದ ಎಲ್ಲ ವರ್ಗಗಳ ಬಡವರ ಏಳಿಗೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಈ ಯೋಜನೆಗಳು ಎಲ್ಲ ಫಲಾನುಭವಿಗಳನ್ನು ತಲುಪುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಯೋಜನೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸಕ್ರಿಯ ಕಾರ್ಯನಿರ್ವಹಣೆಗೆ ಮುಂದಾಗುವಂತೆ ಸೂಚಿಸಿದರು.

ಯಾವುದೇ ಫಲಾನುಭವಿಯು ಸೌಲಭ್ಯದಿಂದ ವಂಚಿತರಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಜನರಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ತಲುಪಿಸಿ ನಿಖರವಾದ ಅಂಕಿ ಅಂಶಗಳನ್ನುಳ್ಳ ಮಾಹಿತಿ ನೀಡಬೇಕು. ಯೋಜನೆಗಳ ಪ್ರಗತಿ ಸಂಬಂಧ ಮೇ;ಧಿಕಾರಿಗಳ ಪರಿಶೀಲನೆ ಬಳಿಕ ಸಲ್ಲಿಕೆಯಾಗುವ ವರದಿಗಳು ಕ್ರಮಬದ್ಧ ಆಗಿರಬೇಕು. ಯೋಜನೆಗಳ ವಿವರಗಳ ಮಾಹಿತಿ ಸಲ್ಲಿಕೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಾಗಬಾರದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾರೋತ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಕುರಿತು ಮುಂದಿನ ಸಭೆಗೆ ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು. ತಪ್ಪಿದಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಯಾವುದೇ ಸಭೆಗೂ ಮೊದಲು ಪಿ.ಪಿ.ಟಿ. ಪ್ರೆಸೆಂಟೇಷನ್ ಮಾಡುವ ಕ್ರಮವನ್ನು ಅಧಿಕಾರಿಗಳು ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷ ಬಿ.ಪಿ.ನಾಗರಾಜ ಮೂರ್ತಿ, ರಾಜಶೇಖರ್, ಸಿದ್ದರಾಜು, ಸದಸ್ಯರಾದ ಸೋಮೇಶ್ವರ್, ಕೆ.ಪಿ.ಚಿನ್ನಸ್ವಾಮಿ, ಎಚ್.ಎನ್.ಜಯರಾಜು, ಎಂ. ದೇವರಾಜು, ಭಾಗ್ಯಾ, ಪ್ರಭುಪ್ರಸಾದ್, ರಾಚಯ್ಯ, ಸಿದ್ದರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ದೀಪಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಆರ್. ಸುರೇಶ್, ಆಹಾರ ಇಲಾಖೆ ಉಪನಿರ್ದೇಶಕಿ ವಸುಂಧರಾ, ಜಿಲ್ಲಾ ಉದ್ಯೋಗಾಧಿಕಾರಿ ಮಹಮದ್ ಅಕ್ಬರ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net