ಗ್ಯಾರಂಟಿ ಯೋಜನೆ ಪ್ರತಿ ಮನೆಗೆ ತಲುಪಿಸುತ್ತೇವೆ

4
Published on

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗೂ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ನಗರ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 5 ಗ್ಯಾರಂಟಿ ಭರವಸೆ ಜನರಿಗೆ ನೀಡಲಾಗಿತ್ತು. ಅಂತೆಯೆ, ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಪಂಚಖಾತ್ರಿ ಯೋಜನೆ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಈ ಮೂಲಕ ಮತ್ತೊಮ್ಮೆ ತಮ್ಮದು ‘ನುಡಿದಂತೆ ನಡೆವ’ ಸರ್ಕಾರ ಎಂಬುದು ಸಾಬೀತಾಗಿದೆ ಎಂದರು.

ಕಾಂಗ್ರೆಸ್ ಬಗ್ಗೆ ಮತದಾರರು ಅನೇಕ ನಿರೀಕ್ಷೆ ಇಟ್ಟಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಮೈಸೂರು ಭಾಗದ ಬಗ್ಗೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ. 4 ವರ್ಷಗಳಿಂದ ಹೆಚ್ಚಿನ ಅನುದಾನ ಸಿಗದೆ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಈಗ ನಮ್ಮವರೇ ಸಿಎಂ ಆಗಿರುವ ಕಾರಣ ಅನುದಾನ ತಂದು ಅಭಿವೃದ್ಧಿಪಡಿಸಲಾಗುವುದು ಎಂದರು.

ಎಚ್.ಡಿ. ಕೋಟೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು, ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದಿಲ್ಲ ಎಂಬ ಮಾತನ್ನು ನಾನು ಈ ಚುನಾವಣೆಯಲ್ಲಿ ಅಳಿಸಿ ಹಾಕಿದ್ದೇನೆ. ಇದಕ್ಕೆ ಮತದಾರರ ಬೆಂಬಲವೇ ಕಾರಣ ಎಂದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆಲುವಿನ ಹಿಂದೆ ಪಕ್ಷದ ಕಾರ್ಯಕರ್ತರ ಕೊಡುಗೆ ಅಪಾರ ಎಂದರು.

5 ಬಾರಿ ಬಿಜೆಪಿ ಗೆದ್ದಿರುವ ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಶ್ರಮ ಕಾರಣವಾಗಿದ್ದು, ಶಾಸಕನಾಗಿ ಅತ್ಯಂತ ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿಯಿಂದ ಜನಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ನಗರಪಾಲಿಕೆ ಚುನಾವಣೆ ಬರಲಿದ್ದು, ಹೆಚ್ಚಿನ ಜವಾಬ್ದಾರಿ ಇದೆ. ತಿಂಗಳಲ್ಲಿ ಕನಿಷ್ಠ ಎರಡು ಬಾರಿಯಾದರೂ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸುವೆ. ನನಗೆ ಇದುವರೆಗೂ ಸಣ್ಣ ಅಧಿಕಾರವೂ ಸಿಕ್ಕಿರಲಿಲ್ಲ. ಈಗ ದೊಡ್ಡ ಅವಕಾಶ ದೊರೆತಿದೆ. ಅದನ್ನು ಜನರ ಸೇವೆಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಕೆ.ಆರ್. ನಗರ ಶಾಸಕ ಡಿ.ರವಿಶಂಕರ್ ಮಾತನಾಡಿ, ಬಹಳ ವರ್ಷಗಳ ಬಳಿಕ ಕೆ.ಆರ್. ನಗರದಲ್ಲಿ ಅಭೂತಪೂರ್ವ ಗೆಲುವು ದೊರೆತಿದೆ. ಮತದಾರರು ಇಟ್ಟಿರುವ ನಂಬಿಕೆಗೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ. ಜನರ ನಡುವೆ ಇದ್ದು ಕೆಲಸ ಮಾಡುತ್ತೇನೆ ಎಂದರು.

ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ತಂದೆ-ತಾಯಿಯನ್ನು ಕಳೆದುಕೊಂಡ ನನಗೆ ಮತದಾರರೇ ತಂದೆ-ತಾಯಿ ಆಗಿದ್ದಾರೆ. ಕ್ಷೇತ್ರದ ಜನರು ಇಟ್ಟಿರುವ ನಂಬಿಕೆ ಉಳಿಸಿಕೊಂಡು ಅಭಿವೃದ್ಧಿ ಮಾಡುತ್ತೇನೆ. ನಂಜನಗೂಡು ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಪಟ್ಟಿ ಮಾಡಿದ್ದು, ಹಿರಿಯರ ಸಲಹೆ ಪಡೆದು ಮುಂದುವರಿಯುತ್ತೇನೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಲತಾ ಸಿದ್ದಶೆಟ್ಟಿ, ಬಿ.ಎಂ. ರಾಮು, ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮುಖಂಡರಾದ ಸುಶೀಲಾ ಕೇಶವಮೂರ್ತಿ, ಹೆಡತಲೆ ಮಂಜುನಾಥ್, ಬಸವರಾಜ ನಾಯಕ, ಶಿವಪ್ರಸಾದ್, ತಲಕಾಡು ಮಂಜುನಾಥನ್, ಎನ್.ಆರ್. ನಾಗೇಶ್, ನಗರಾಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಗಿರೀಶ್ ನಾಯಕ ಇನ್ನಿತರರು ಹಾಜರಿದ್ದರು.
ಇದಕ್ಕೂ ಮೊದಲು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ನೂತನ ಶಾಸಕರನ್ನು ಕಾಂಗ್ರೆಸ್ ಕಚೇರಿ ವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net