

ಕೆ.ಆರ್.ನಗರ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಶೇ.98ರಷ್ಟು ಫಲಾನುಭವಿಗಳಿಗೆ ತಲುಪುತ್ತಿದ್ದು ಉಳಿದವರಿಗೂ ಅವುಗಳ ಅನುಕೂಲ ಕಲ್ಪಿಸಿಕೊಡಲು ಕಾರ್ಯಯೋಜನೆ ಹಮ್ಮಿಕೊಳ್ಳುವುದಾಗಿ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಕೆ.ಆರ್.ನಗರ ತಾಲೂಕು ಅಧ್ಯಕ್ಷ ಎಂ.ಎಸ್.ಮಹದೇವ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿಗಳಲ್ಲಿ ನಿಯಮಾನುಸಾರ ಪಡಿತರ ವಿತರಣೆ ಮಾಡುತ್ತಿಲ್ಲ ಎಂದು ವ್ಯಾಪಕ ದೂರುಗಳು ಕೇಳಿ ಬಂದಿದ್ದು, ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
ಪಂಚ ಗ್ಯಾರಂಟಿ ಯೋಜನೆಗಳು ಅರ್ಹರ ಮನೆ ಬಾಗಿಲಿಗೆ ತಲುಪದಿದ್ದಲ್ಲಿ ಅದಕ್ಕೆ ಸಂಬಂಧಿತ ಅಧಿಕಾರಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಸಮಿತಿಯ ಪದಾಧಿಕಾರಿಗಳೊಂದಿಗೆ ದೂರುಗಳು ಕೇಳಿ ಬಂದಿರುವ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರದಾರರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ವಿಪರೀತವಾಗುತ್ತಿರುವುದರೊಂದಿಗೆ ಸೆಸ್ಕ್ ಅಸಮರ್ಪಕ ಸೇವೆಯ ಬಗೆಯೂ ಗ್ಯಾರಂಟಿ ಸಮಿತಿಗೆ ಹಲವು ದೂರುಗಳು ಬಂದಿದ್ದು, ಮುಂದೆ ಸಮರ್ಪಕ ಸೇವೆ ನೀಡಿ ಸಾಲಿಗ್ರಾಮ ಭಾಗಕ್ಕೆ ಹೆಚ್ಚು ಗಮನ ಹರಿಸಬೇಕು. ಸರ್ಕಾರ ಉಚಿತ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಇದರ ಅನುಕೂಲ ಅರ್ಹರಿಗೆಲ್ಲ ಸಿಗುವಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಾರೆ ಎಂಬ ಮನೋಭಾವನೆಯನ್ನು ಚಾಲಕರು ಮತ್ತು ನಿರ್ವಹಕರು ಬಿಟ್ಟು ಅವರಿಗೆ ಉತ್ತಮ ಸೇವೆ ನೀಡಬೇಕು ಅದರೊಂದಿಗೆ ಆಧಾರ್ ಕಾರ್ಡ್ ಮರೆತು ಬಂದು ಮೊಬೈಲ್‌ಗಳಲ್ಲಿ ಫೋಟೋ ತೋರಿಸಿದರೆ ಟಿಕೆಟ್ ಹರಿದು ಪ್ರಯಾಣಕ್ಕೆ ಸಹಾಯ ಮಾಡದಿದ್ದಲ್ಲಿ ಅಂತಹವರ ವಿರುದ್ಧ ಸರ್ಕಾರಕ್ಕೆ ದೂರು ನೀಡುವುದಾಗಿ ತಿಳಿಸದರು.
ಗೃಹಲಕ್ಷ್ಮಿ ಯೋಜನೆಯಡಿ ಸರ್ಕಾರದ ವತಿಯಿಂದ ನೀಡುತ್ತಿರುವ 2 ಸಾವಿರ ರೂ. ಹಣ ತಲುಪದಿದ್ದವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗುರುತಿಸಿ ಅವರ ಮನೆ ಬಾಗಿಲಿಗೆ ತೆರಳಿ ದಾಖಲೆ ಪರಿಶೀಲಿಸಿ ಹಣ ಬರುವಂತೆ ನೋಡಿಕೊಂಡು ಈ ಸಂಬಂಧ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತರಬೇಕು. ಸಹಕಾರ ಬಯಸಿ ಕಚೇರಿಗೆ ಬರುವವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ವ್ಯಾಪ್ತಿಯ 597 ಮಂದಿ ನಿರುದ್ಯೋಗಿ ಪದವೀಧರರು ನೋಂದಣಿ ಮಾಡಿಸಿಕೊಂಡಿದ್ದು, 357 ಮಂದಿ ಹಣ ಪಡೆಯುತ್ತಿದ್ದಾರೆ. ಉಳಿದವರಿಗೂ ಯೋಜನೆಯ ಅನುಕೂಲ ದೊರೆಯಲು ಈ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದರಲ್ಲದೆ, ನಿಯಮಾನುಸಾರ ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಾಲಿಗ್ರಾಮ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್, ಸದಸ್ಯರಾದ ಸೈಯದ್‌ಜಾಬೀರ್, ಜಿ.ಎಂ.ಹೇಮಂತ್, ಕೆಂಚಿ ಮಂಜು, ಮಂಚನಹಳ್ಳಿಧನು, ಮಹದೇವನಾಯಕ, ಕುಮಾರ್, ಸರಿತಾ ಜವರಪ್ಪ, ಜಯಮ್ಮ, ಮಹಾಲಿಂಗು, ತಾಪಂ ಇಒ ವಿ.ಪಿ.ಕುಲದೀಪ್, ಕೌಶಲ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರ್ದೇಶಕಿ ರಾಣಿ, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಸೆಸ್ಕ್ ಎಇಇ ಅರ್ಕೇಶ್‌ಮೂರ್ತಿ, ಆಹಾರ ಶಿರಸ್ತೇದಾರ್ ಮಂಜುನಾಥ್, ಸಾರಿಗೆ ಸಂಚಾರ ನಿಯಂತ್ರಣಾಧಿಕಾರಿ ಸುರೇಶ್ ಮತ್ತಿತರರು ಇದ್ದರು.